ಮಂಡಳಿಗೆ ಆಯ್ಕೆ ಮಾಡುವ ಅವಕಾಶಗಳ ಬಗ್ಗೆ ತಿಳಿಸಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2018-11-22 16:25 GMT

ಬೆಂಗಳೂರು, ನ.22: ರಾಜ್ಯ ವಕ್ಫ್ ಮಂಡಳಿಗೆ ಮುಸ್ಲಿಂ ಸಂಸದರು, ಶಾಸಕರು, ಬಾರ್ ಕೌನ್ಸಿಲ್ ಸದಸ್ಯರು ಹಾಗೂ ಮುತವಲ್ಲಿ ಕೆಟಗರಿಯಲ್ಲಿ ಒಬ್ಬರನ್ನು ಅಥವಾ ಇಬ್ಬರನ್ನು ಮೀರದಂತೆ ಆಯ್ಕೆ ಮಾಡುವ ಅವಕಾಶಗಳ ಬಗ್ಗೆ ನಿಲುವು ತಿಳಿಸುವಂತೆ ಹೈಕೋರ್ಟ್ ಗುರುವಾರ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.

ರಾಜ್ಯ ಬಾರ್ ಕೌನ್ಸಿಲ್‌ನ ಚುನಾಯಿತ ಸದಸ್ಯರಾಗಿರುವ ತಮ್ಮ ಹೆಸರನ್ನು ರಾಜ್ಯ ವಕ್ಫ್ ಮಂಡಳಿ ಚುನಾವಣೆಯ ಕರಡು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವುದನ್ನು ಪ್ರಶ್ನಿಸಿ ವಕೀಲ ಆಸೀಫ್ ಅಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.

ಈ ವೇಳೆ ವಕ್ಫ್ ಕಾಯ್ದೆ ಪ್ರಕಾರ ಚುನಾವಣೆಗೆ ಪರಿಗಣಿಸಬೇಕಾದ ಕೆಟಗರಿಗಳಲ್ಲಿ ಒಬ್ಬರನ್ನು ಅಥವಾ ಇಬ್ಬರನ್ನು ಮೀರದಂತೆ ಸರಕಾರ ಆಯ್ಕೆ ಮಾಡಬಹುದು ಎಂದಿದೆ. ಆದರೆ, ಸರಕಾರ ಒಬ್ಬರನ್ನು ಆಯ್ಕೆ ಮಾಡುತ್ತದೆಯೇ ಅಥವಾ ಇಬ್ಬರನ್ನು ಅನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಸುವಂತೆ ಸರಕಾರದ ಪರ ವಕೀಲರಿಗೆ ಸೂಚನೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ (ನ.23) ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್, ವಕ್ಫ್ ಮಂಡಳಿಗೆ ಮುಸ್ಲಿಂ ಸಂಸದರು, ಶಾಸಕರು, ಬಾರ್ ಕೌನ್ಸಿಲ್ ಸದಸ್ಯರು ಹಾಗೂ ಮುತವಲ್ಲಿ ಕೆಟಗರಿಯಲ್ಲಿ ಒಬ್ಬರನ್ನು ಅಥವಾ ಇಬ್ಬರನ್ನು ಮೀರದಂತೆ ಆಯ್ಕೆ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕಿದೆ. ಸಂಖ್ಯೆ ನಿಗದಿಪಡಿಸುವುದು ಸರಕಾರಕ್ಕೆ ಬಿಟ್ಟ ವಿಚಾರ. ಹಾಲಿ ಸಂಸದರು, ಶಾಸಕರು ಇಲ್ಲದಿದ್ದಲ್ಲಿ ಮಾಜಿಗಳನ್ನು ಪರಿಗಣಿಸಬಹುದು ಎಂದು ವಕ್ಫ್ ತಿದ್ದುಪಡಿ ಕಾಯ್ದೆ ಹೇಳುತ್ತದೆ. ಆದರೆ, ಬಾರ್ ಕೌನ್ಸಿಲ್‌ನಲ್ಲಿ ಮುಸ್ಲಿಂ ಸದಸ್ಯ ಇಲ್ಲದಿದ್ದಲ್ಲಿ ಹಿರಿಯ ಮುಸ್ಲಿಂ ವಕೀಲರನ್ನು ರಾಜ್ಯ ಸರಕಾರ ನೇಮಕ ಮಾಡಬಹುದು ಎಂದು ಹೇಳಲಾಗಿದ್ದು, ಅಲ್ಲಿ ಮಾಜಿ ಸದಸ್ಯರ ಪ್ರಸ್ತಾಪವಿಲ್ಲ. ಮುಸ್ಲಿಂ ಸದಸ್ಯರ ಕೆಟಗರಿ ತಮ್ಮ ಅರ್ಜಿದಾರರಿಗೆ ಅನ್ವಯವಾಗುತ್ತದೆ. ಏಕೆಂದರೆ ಅವರೊಬ್ಬರೇ ಬಾರ್ ಕೌನ್ಸಿಲ್‌ನಲ್ಲಿ ಚುನಾಯಿತ ಮುಸ್ಲಿಂ ಸದಸ್ಯರಾಗಿದ್ದಾರೆ. ತಿದ್ದುಪಡಿ ಕಾಯ್ದೆಯಲ್ಲಿನ ಅವಕಾಶಗಳನ್ನು ಕಡೆಗಣಿಸಿ ಪ್ರಾದೇಶಿಕ ಆಯುಕ್ತರು ಕರಡು ಮತದಾರರ ಪಟ್ಟಿಯಿಂದ ತಮ್ಮ ಅರ್ಜಿದಾರರ ಹೆಸರು ಕೈಬಿಟ್ಟಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ಪ್ರತಿವಾದಿ ಪರ ವಕೀಲರು, ಬಾರ್ ಕೌನ್ಸಿಲ್ ಕಾಯ್ದೆ ಪ್ರಕಾರ ಗೆಜೆಟ್ ಅಧಿಸೂಚನೆ ಪ್ರಕಟಗೊಂಡ ಬಳಿಕವಷ್ಟೇ ಬಾರ್ ಕೌನ್ಸಿಲ್‌ಗೆ ಚುನಾಯಿತರಾದವರು ಅಧಿಕೃತ ಸದಸ್ಯರಾಗುತ್ತಾರೆ. ಆಗ ಮಾತ್ರ ವಕ್ಫ್ ಮಂಡಳಿ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಊರ್ಜಿತವಾಗುತ್ತದೆ. ಆದರೆ, ವಕ್ಫ್ ಮಂಡಳಿಯ ಚುನಾವಣೆಗೆ ಪ್ರಾದೇಶಿಕ ಆಯುಕ್ತರು ಕರಡು ಮತದಾರರ ಪಟ್ಟಿ ಪ್ರಕಟಿಸಿದ ವೇಳೆ ಅರ್ಜಿದಾರರು ಬಾರ್ ಕೌನ್ಸಿಲ್‌ಗೆ ಚುನಾಯಿತರಾಗಿದ್ದಿರಬಹುದು. ಆದರೆ, ಅವರು ಅಧಿಕೃತವಾಗಿ ಸದಸ್ಯರಾಗಿರಲಿಲ್ಲ. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಿದ್ದೇ ತಪ್ಪು ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.

ರಾಜ್ಯ ವಕ್ಫ್ ಮಂಡಳಿಯ ಚುನಾವಣೆಗೆ ಬೆಂಗಳೂರು ಪ್ರಾದೇಶಿಕ ಆಯುಕ್ತರು 2018ರ ಸೆ.10ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದರು. ಅದರಲ್ಲಿ ಬಾರ್ ಕೌನ್ಸಿಲ್‌ನ ಹಾಲಿ ಚುನಾಯಿತ ಮುಸ್ಲಿಂ ಸದಸ್ಯ ಆಸೀಫ್ ಅಲಿ ಅವರ ಹೆಸರು ಸೇರಿಸಲಾಗಿತ್ತು. ಆದರೆ, ಅ.15ರಂದು ಆಸೀಫ್ ಅಲಿ ಅವರ ಹೆಸರನ್ನು ತೆಗೆದುಹಾಕಿ ಬಾರ್ ಕೌನ್ಸಿಲ್‌ನ ಮಾಜಿ ಸದಸ್ಯ ರಿಯಾಜ್ ಖಾನ್ ಅವರ ಹೆಸರನ್ನು ಸೇರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News