ಬಿ.ಸಿ.ಪಾಟೀಲ್‌ಗೆ ಸಚಿವ ಸ್ಥಾನ ಸಿಗಬೇಕು: ಸಚಿವ ಝಮೀರ್ ಅಹ್ಮದ್
Update: 2018-11-22 22:02 IST
ಹಾವೇರಿ, ನ.22: ಹಿರಿಯ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್‌ಗೆ ಸಚಿವ ಸ್ಥಾನ ಸಿಗಬೇಕು. ಈ ಸಂಬಂಧ ನಾನು ರಾಜ್ಯ ನಾಯಕರಿಗೆ ಮನವಿ ಮಾಡಿದ್ದೇನೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯವರಾದ ಬಿ.ಸಿ.ಪಾಟೀಲ್ 2004ರಲ್ಲಿ ಶಾಸಕರಾಗಿ ಆಯ್ಕೆಯಾದವರು. ನಾನು 2005ರಲ್ಲಿ ಶಾಸಕನಾದೆ. ಸಾರ್ವಜನಿಕ ಜೀವನದಲ್ಲಿ ಅವರು ನನಗಿಂತ ಒಂದು ವರ್ಷ ಹಿರಿಯರು ಎಂದರು.
ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಮುನ್ನ ಡಿಸೆಂಬರ್ 3ರಂದು ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‌ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.