ವಿದ್ಯಾವಂತರಾಗಿದ್ದರೂ ಉದ್ಯೋಗ ದೊರಕದ ಹತಾಶೆ: ರೈಲಿನೆದುರು ಜಿಗಿದ ಯುವಕರು; ಮೂವರ ಸಾವು

Update: 2018-11-23 17:10 GMT

ಜೈಪುರ, ನ.23: ವಿದ್ಯಾವಂತರಾಗಿದ್ದರೂ ಉದ್ಯೋಗ ದೊರಕದ ನಿರಾಶೆಯಲ್ಲಿ ನಾಲ್ವರು ಯುವಕರು ಚಲಿಸುತ್ತಿದ್ದ ರೈಲಿನ ಎದುರು ಹಾರಿದ ಘಟನೆ ಅಲ್ವಾರ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಾಯಗೊಂಡಿರುವ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರನ್ನು ಮನೋಜ್ ಮೀನ(24 ವರ್ಷ), ಸತ್ಯನಾರಾಯಣ(22 ವರ್ಷ), ರಿತುರಾಜ್(17 ವರ್ಷ) ಎಂದು ಗುರುತಿಸಲಾಗಿದೆ. ಅಭಿಷೇಕ್ ಮೀನ(22 ವರ್ಷ) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು.

ಮನೋಜ್ ಮತ್ತು ಸತ್ಯನಾರಾಯಣ ಪದವೀಧರರಾಗಿದ್ದರೆ ರಿತುರಾಜ್ ಕಲಾ ವಿದ್ಯಾರ್ಥಿಯಾಗಿದ್ದಾನೆ. ಅಭಿಷೇಕ್ ಇತ್ತೀಚೆಗಷ್ಟೇ ಪದವಿ ಪರೀಕ್ಷೆ ಪೂರೈಸಿದ್ದ. ಆರು ಮಂದಿ ಸ್ನೇಹಿತರು ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿಗೆ ಬಂದಿದ್ದಾರೆ. ಆದರೆ ಇಬ್ಬರು ವಾಪಾಸು ಹೋಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಾಪಾಸು ತೆರಳಿರುವವರಲ್ಲಿ ಒಬ್ಬನಾಗಿರುವ ರಾಹುಲ್ ಮೀನ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಸಂಜೆ ತನಗೆ ಕರೆ ಮಾಡಿದ್ದ ಸತ್ಯನಾರಾಯಣ ಶಾಂತಿಕುಂಜದ ಬಳಿಯಿರುವ ರೈಲ್ವೆ ಹಳಿಯತ್ತ ಬರುವಂತೆ ತಿಳಿಸಿದ್ದ. ಅದರಂತೆ ತಾನಲ್ಲಿಗೆ ಹೋದಾಗ ಅಲ್ಲಿ ಸತ್ಯನಾರಾಯಣ, ಮನೋಜ್, ರಿತುರಾಜ್, ಅಭಿಷೇಕ್ ಹಾಗೂ ಸಂತೋಷ್ ಇದ್ದರು. ಉದ್ಯೋಗ ದೊರಕದ ಕಾರಣ ತಮಗೆ ಬದುಕುವ ಇಷ್ಟವಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಹೇಳಿದರು. ತಮಾಷೆ ಮಾಡಬೇಡ ಎಂದು ತಾನವರಿಗೆ ಹೇಳಿದೆ. ಅಷ್ಟರಲ್ಲಿ ಆ ದಾರಿಯಾಗಿ ಬಂದ ರೈಲಿನ ಎದುರು ನಾಲ್ವರು ಹಾರಿದರು. ಘಟನೆಯ ಕುರಿತು ಅಭಿಷೇಕ್‌ನ ಸಹೋದರನಿಗೆ ತಾನು ಮಾಹಿತಿ ನೀಡಿರುವುದಾಗಿ ರಾಹುಲ್ ತಿಳಿಸಿದ್ದಾನೆ.

 ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ಮೃತರ ಮೊಬೈಲ್‌ಗೆ ಬಂದಿರುವ ಕರೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News