ಆರ್‌ಟಿಐ ಕಾಯ್ದೆ ತಿದ್ದುಪಡಿಗಳ ಕುರಿತು ಕೇಂದ್ರವು ಸಿಐಸಿಯೊಂದಿಗೆ ಸಮಾಲೋಚಿಸಿಲ್ಲ

Update: 2018-11-23 17:48 GMT

ಹೊಸದಿಲ್ಲಿ,ನ.23: ಕೇಂದ್ರ ಮತ್ತು ರಾಜ್ಯಗಳ ಮಾಹಿತಿ ಆಯುಕ್ತರ ಅಧಿಕಾರಾವಧಿ ಮತ್ತು ವೇತನಗಳನ್ನು ನಿರ್ಧರಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡಲು ಸರಕಾರವು ಮಾಹಿತಿ ಹಕ್ಕು ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳ ಬಗ್ಗೆ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ವು ಆಂತರಿಕವಾಗಿ ಚರ್ಚಿಸಿತ್ತು. ಆದರೆ ಈ ಬಗ್ಗೆ ಸರಕಾರವು ಆಯೋಗದೊಡನೆ ಸಮಾಲೋಚಿಸಿರಲಿಲ್ಲ,ಅದು ನಮ್ಮನ್ನು ಕೇಳಿರಲೂ ಇಲ್ಲ ಎಂದು ಶನಿವಾರ ಹುದ್ದೆಯಿಂದ ನಿವೃತ್ತರಾಗುತ್ತಿರುವ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ.ಮಾಥೂರ್ ಅವರು ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ಈ ತಿದ್ದುಪಡಿಗಳು ಸರಕಾರಕ್ಕೆ ಮಾಹಿತಿ ಆಯುಕ್ತರ ಮೇಲೆ ಹೆಚ್ಚಿನ ನಿಯಂತ್ರಣ ನೀಡುತ್ತವೆ ಎಂದು ವಾದಿಸುತ್ತಿರುವ ಆರ್‌ಟಿಐ ಕಾರ್ಯಕರ್ತರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಆಯೋಗದ ಬಲವನ್ನು ಕಡಿಮೆ ಮಾಡುವುದರಿಂದ ಅದರ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ, ಮತ್ತು ಬಾಕಿ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತದೆ ಎಂದು ಮಾಥೂರ್ ಹೇಳಿದರು.

ಖಾಸಗಿತನ ವಿಷಯವು ಕಾಯ್ದೆಯ ಬಹುದೊಡ್ಡ ಸವಾಲಾಗಲಿದೆ ಎಂದ ಅವರು, ಜಗತ್ತು ಎರಡೂ ದಿಕ್ಕುಗಳಲ್ಲಿ ಚಲಿಸುತ್ತದೆ. ಹೆಚ್ಚಿನ ಖಾಸಗಿತನ ಮತ್ತು ಹೆಚ್ಚಿನ ಮಾಹಿತಿಗೆ ಬೇಡಿಕೆಯು ಹೆಚ್ಚುತ್ತಿದೆ. ನಾವು ಸರಿಯಾದ ಸಮತೋಲನವನ್ನು ಕಂಡುಕೊಳ್ಳುವ ಅಗತ್ಯವಿದೆ. ಈ ಬಗ್ಗೆ ಸಾರ್ವಜನಿಕ ಚರ್ಚೆಯ ಅಗತ್ಯವಿದೆ ಎಂದು ಹೇಳಿದರು. ಕಳೆದ ತಿಂಗಳು ಕೇಂದ್ರ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯುಲು ಅವರು ಕಾಯ್ದೆಯಲ್ಲಿ ಉದ್ದೇಶಿತ ಬದಲಾವಣೆಗಳಿಗೆ ವಿರೋಧ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News