×
Ad

ಹಿರಿಯ ರಾಜಕೀಯ ಮುತ್ಸದ್ಧಿ ಸಿ.ಕೆ.ಜಾಫರ್ ಶರೀಫ್ ನಿಧನ

Update: 2018-11-25 12:56 IST

ಬೆಂಗಳೂರು, ನ.25: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಚಳ್ಳಕೆರೆ ಕರೀಂ(ಸಿ.ಕೆ) ಜಾಫರ್ ಶರೀಫ್(85) ಅವರು ರವಿವಾರ ನಿಧನರಾಗಿದ್ದು, ನಾಳೆ(ನ.26) ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ಜರುಗಲಿದೆ.

ವಯೋಸಹಜ ಕಾಯಿಲೆಯಿಂದಾಗಿ ಶರೀಫ್ ಅವರನ್ನು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ, ರವಿವಾರ ಮಧ್ಯಾಹ್ನ ಕೊಯುಸಿರೆಳೆದಿದ್ದಾರೆಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಸೋಮವಾರ ಮಧ್ಯಾಹ್ನ ಲುಹರ್ ನಮಾಝ್ ಬಳಿಕ ಫೇಜರ್‌ಟೌನ್‌ನ ಖಾದ್ರಿಯಾ ಮಸ್ಜಿದ್‌ನಲ್ಲಿ ಜನಾಝ ನಮಾಝ್ ನೆರವೇರಿಸಲಾಗುವುದು. ಆ ನಂತರ, ಖುದ್ದೂಸ್ ಸಾಹೇಬ್ ಖಬರಸ್ಥಾನ್(ಸ್ಮಶಾನ)ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

1933 ನವೆಂಬರ್ 3ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಜನಿಸಿದ್ದ ಜಾಫರ್ ಶರೀಫ್, ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅಧಿಕಾರವಧಿಯಲ್ಲಿ ರಾಜಕೀಯ ಪ್ರವೇಶಿಸಿದ್ದರು. ಆಮೇಲೆ ಕಾಂಗ್ರೆಸ್ ಇಬ್ಭಾಗವಾದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಣದೊಂದಿಗೆ ಗುರುತಿಸಿಕೊಂಡರು.

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಸಚಿವ ಸಂಪುಟದಲ್ಲಿ ಶರೀಫ್ ಅವರು (1991-1995) ರೈಲ್ವೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ದೇಶದಾದ್ಯಂತ ರೈಲ್ವೆ ಮೀಟರ್ ಗೇಜ್ ಹಳಿಗಳನ್ನು ಬ್ಯಾಡ್‌ಗೇಜ್ ಆಗಿ ಪರಿವರ್ತನೆಗೆ ಆದ್ಯತೆ ನೀಡಿದ್ದರು.

ಆ ಮೂಲಕ ದೇಶದ ಎಲ್ಲ ನಗರಗಳು ಮತ್ತು ಊರುಗಳ ಸಂಪರ್ಕ ಸಾಧಿಸುವಲ್ಲಿ ಜಾಫರ್ ಶರೀಫ್ ಅವರ ಪಾತ್ರ ಅನನ್ಯ. ಜತೆಗೆ ಬೆಂಗಳೂರಿನಿಂದ ದೇಶದ ದೊಡ್ಡ ನಗರಗಳಿಗೆ ರೈಲುಗಳ ಸಂಚಾರ ಪ್ರಾರಂಭಿಸಿದರು ಮತ್ತು ಬೆಂಗಳೂರು ನಗರಕ್ಕೆ ರೈಲ್ವೆ ಅಚ್ಚು ಮತ್ತು ಗಾಲಿ ಕಾರ್ಖಾನೆ ತಂದ ಕೀರ್ತಿಯೂ ಶರೀಫ್ ಅವರಿಗೆ ಸಲ್ಲಬೇಕು.

ಸಂಸದರ ಪ್ರದೇಶಾಭಿವೃದ್ಧಿ ಅನುದಾನವನ್ನು ಸಾರ್ಥಕ ಕಾರ್ಯಗಳಿಗೆ ಬಳಕೆ ಮಾಡಿದ ದಾಖಲೆಯೂ ಅವರ ಹೆಸರಿನಲ್ಲಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಶಾಲೆ, ಕಾಲೇಜು, ಕಂಪ್ಯೂಟರ್ ಶಿಕ್ಷಣ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದ್ದರು. ಪಕ್ಷ ಮತ್ತು ನಿಷ್ಠೆಗೆ ಮತ್ತೊಂದು ಹೆಸರಾಗಿದ್ದ ಜಾಫರ್ ಶರೀಫ್, ಕಾಂಗ್ರೆಸ್‌ನಲ್ಲಿ ಅತ್ಯಂತ ಪ್ರಭಾವಿ ಮುಖಂಡರಾಗಿದ್ದರು. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಕಾಲದಿಂದಲೂ ಗಾಂಧಿ ಕುಟುಂಬಕ್ಕೆ ನಿಷ್ಠಾವಂತರಾಗಿದ್ದ ಶರೀಫ್ ಅವರ ಪುತ್ರ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ನಂತರ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು.

ಶರೀಫ್ ಕುಟುಂಬ..!

ಸಿ.ಕೆ.ಜಾಫರ್ ಶರೀಫ್ ಅವರ ಪತ್ನಿ ಅಮಿನಾಬಿ ಅವರು 2009ರಲ್ಲಿ ನಿಧನರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ನಾಲ್ವರು ಮಕ್ಕಳು. ಅದರಲ್ಲಿ ಕಿರಿಯ ಪುತ್ರ ಖಾದರ್ ನವಾಝ್ ಶರೀಫ್ 1999ರಲ್ಲಿ ನಿಧನರಾಗಿದ್ದಾರೆ. 2009ರಲ್ಲಿ ಲೋಕಸಭೆ ಚುನಾವಣೆಗೆ ಕೇವಲ ಮೂರು ದಿನಗಳ ಮೊದಲು ಹಿರಿಯ ಪುತ್ರನ ಅಬ್ದುಲ್ ಕರೀಂ ಅವರು ನಿಧನರಾಗಿದ್ದರು. ಒಂದೇ ವರ್ಷ ತಾಯಿ ಮತ್ತು ಪುತ್ರ ಇಬ್ಬರೂ ನಿಧನರಾದರು.

ಇಬ್ಬರು ಮೊಮ್ಮಕ್ಕಳು ಇದ್ದು, ರೆಹಮಾನ್ ಶರೀಫ್ ಅವರಿಗೆ ಹೆಬ್ಬಾಳ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್ ಕೊಡಿಸಲು ಶರೀಫ್ ಯತ್ನಿಸಿದ್ದರು. ಈ ಹಿಂದೆ ರೆಹಮಾನ್ ಶರೀಫ್ ಎರಡು ಬಾರಿ ಟಿಕೆಟ್ ನೀಡಿದ್ದಾಗಲೂ ಸೋತಿದ್ದರು. ಈ ಬಾರಿ ಟಿಕೆಟ್ ನೀಡಿರಲಿಲ್ಲ. ಶರೀಫ್ ಅವರ ಮತ್ತೊಬ್ಬ ಮೊಮ್ಮಗ ವಹಾಬ್.

ರಾಜಧಾನಿ ಬೆಂಗಳೂರಿಗೆ ಕೊಡುಗೆ

ದೇಶದ ರೈಲ್ವೆ ಮಾರ್ಗ ಅಭಿವೃದ್ಧಿ, ಗೇಜ್ ಪರಿವರ್ತನೆ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳ ಸುಧಾರಣೆಗೆ ಅಪಾರ ಕೊಡುಗೆ ಅನ್ನು ಜಾಫರ್ ಶರೀಫ್ ನೀಡಿದ್ದರು. ಯಲಹಂಕ ರೈಲ್ವೆ ನಿಲ್ದಾಣದ ಸಮೀಪ ಇರುವ ‘ರೈಲು ಮತ್ತು ಗಾಲಿ ಕಾರ್ಖಾನೆ’ ಸ್ಥಾಪನೆಯಾಗಲು ಶರೀಫ್ ಶ್ರಮಿಸಿದ್ದರು.

ಜಾಫರ್ ಬದುಕಿನ ಪಯಣ

-1971-ಮೊದಲ ಬಾರಿ ಸಂಸದರಾಗಿ ಆಯ್ಕೆ

-1977-ಲೋಕಸಭೆಗೆ ಎರಡನೇ ಬಾರಿ ಆಯ್ಕೆ

-1980-ಲೋಕಸಭೆಗೆ ಮೂರನೇ ಬಾರಿ ಆಯ್ಕೆ

-1980-84- ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ

-1984-ಲೋಕಸಭೆಗೆ ನಾಲ್ಕನೇ ಬಾರಿ ಆಯ್ಕೆ, ಜೊತೆಗೆ ಕೇಂದ್ರದ ನೀರಾವರಿ ಖಾತೆ ರಾಜ್ಯ ಸಚಿವ

-1988-89-ಕೇಂದ್ರದ ಕಲ್ಲಿದ್ದಲು ಖಾತೆ ರಾಜ್ಯ ಸಚಿವ

-1989-ಕೇಂದ್ರದ ಲೋಕಸಭೆಗೆ ಐದನೇ ಬಾರಿ ಆಯ್ಕೆ

-1989-90-ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯ, -ಕೇಂದ್ರ ಸರಕಾರದ ಖಾತ್ರಿ ಸಮಿತಿಯ ಸದಸ್ಯ

 -ವಾಣಿಜ್ಯ ಸಲಹಾ ಸಮಿತಿ ಸದಸ್ಯ

-ಆರೋಗ್ಯ-ಇಂಧನ-ಅಣುಶಕ್ತಿ ಮತ್ತು ಮಾಧ್ಯಮ ವ್ಯವಹಾರಗಳಾ ಖಾತೆ ಸಲಹಾ ಸಮಿತಿ ಸದಸ್ಯ

-1991-95- ಲೋಕಸಭೆಗೆ ಆರನೇ ಬಾರಿ ಆಯ್ಕೆ, ರೈಲ್ವೆ ಖಾತೆ ಸಚಿವ

-1998-ಲೋಕಸಭೆಗೆ ಏಳನೇ ಬಾರಿ ಆಯ್ಕೆ

-ಪತ್ರಿಕಾ ವ್ಯವಹಾರ ಮತ್ತು ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿ ಯೋಜನೆ ಸಮಿತಿಗಳ ಸದಸ್ಯ

-2004-ಲೋಕಸಭೆ ಚುನಾವಣೆಯಲ್ಲಿ ಪರಾಭವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News