ರಾಜ್ಯದಲ್ಲಿ ಪೆಟ್ರೋಲ್‌ ಪಂಪ್ ಜಾಲ ವಿಸ್ತರಣೆ: ಡಿ.ಎಲ್.ಪ್ರಮೋದ್

Update: 2018-11-25 13:00 GMT

ಬೆಂಗಳೂರು, ನ.25: ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ರಾಜ್ಯದಲ್ಲಿ ಅನುಕ್ರಮವಾಗಿ ಅಂದಾಜು ಶೇ.7 ಮತ್ತು ಶೇ.9ರ ದರದಲ್ಲಿ ಹೆಚ್ಚುತ್ತಿವೆ. ಹೀಗಾಗಿ, ಪೆಟ್ರೋಲ್ ಮತ್ತು ಡೀಸೆಲ್‌ನ ಬೇಡಿಕೆಯ ಹೆಚ್ಚಳಕ್ಕೆ ಅನುಗುಣವಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪೆನಿಗಳು ಪೆಟ್ರೋಲ್ ಪಂಪ್ ಜಾಲ ವಿಸ್ತರಣೆಗೆ ಮುಂದಾಗಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಾರ್ಯಕಾರಿ ನಿರ್ದೇಶಕ ಡಿ.ಎಲ್.ಪ್ರಮೋದ್ ತಿಳಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತೈಲ ಮಾರುಕಟ್ಟೆ ಕಂಪೆನಿಗಳು ಪ್ರಾಥಮಿಕವಾಗಿ ಹೆಚ್ಚುತ್ತಿರುವ ಇಂಧನ ಅಗತ್ಯವನ್ನು ಪೂರೈಸಲು ಮತ್ತು ಮುಂಬರುವ ಹೆದ್ದಾರಿಗಳು, ಕೃಷಿ ತಾಣಗಳು ಮತ್ತು ಕೈಗಾರಿಕಾ ತಾಣಗಳಲ್ಲಿ ಉದ್ಭವಿಸಲಿರುವ ಮಾರುಕಟ್ಟೆಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ರೀಟೈಲ್ ಔಟ್‌ಲೆಟ್(ಪೆಟ್ರೋಲ್‌ ಪಂಪ್‌ಗಳು)ಜಾಲದ ವಿಸ್ತರಣೆಯನ್ನು ಮಾಡುತ್ತಿವೆ ಎಂದರು.

ಗ್ರಾಮೀಣ, ದೂರದ ಮತ್ತು ಅತಿದೂರ ಪ್ರದೇಶಗಳಲ್ಲಿರುವ ಚಿಲ್ಲರೆ ಮಾರಾಟದ ಜಾಲವನ್ನು ದೂರದ ಪ್ರದೇಶಗಳಲ್ಲಿ ವಾಸಿಸುವ ಜನರ ಅದರಲ್ಲೂ ಮುಖ್ಯವಾಗಿ ಎಚ್.ಎಸ್.ಡಿ.ಗಳ ಗ್ರಾಮೀಣ ಕೃಷಿ ಬೇಡಿಕೆಯನ್ನು ಪೂರೈಸಲು, ಗುಣಮಟ್ಟದ ಉತ್ಪನ್ನವನ್ನು ತಲುಪುವ ಉದ್ದೇಶದಿಂದ ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು.

ರೀಟೈಲ್ ಔಟ್‌ಲೆಟ್ ಜಾಲವು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿವೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪೆನಿಗಳಾದ ಐಓಸಿಎಲ್, ಬಿಪಿಸಿಎಲ್ ಹಾಗೂ ಎಚ್‌ಪಿಸಿಎಲ್‌ಗಳು ಪೆಟ್ರೋಲ್‌ಪಂಪ್ ಸ್ಥಾಪಿಸಲು ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಿ, ಜಾಹೀರಾತುಗಳನ್ನು ನೀಡಿವೆ ಎಂದು ಪ್ರಮೋದ್ ತಿಳಿಸಿದರು.

ಕೇಂದ್ರ ಸರಕಾರದ ‘ಸುಗಮ ವಾಣಿಜ್ಯ ನಿರ್ವಹಣೆ’ ಮಾಡುವ ಉದ್ದೇಶಕ್ಕೆ ಒತ್ತು ನೀಡಿ ಡೀಲರ್‌ಗಳ ಆಯ್ಕೆಯ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. ಬಳಕೆದಾರ ಸ್ನೇಹಿಯಾದ ಆನ್‌ಲೈನ್ ಅರ್ಜಿಗಳನ್ನು ಪರಿಚಯಿಸಲಾಗಿದೆ. ಅರ್ಜಿದಾರರು ಅರ್ಹತೆಯ ಸಾಬೀತಿಗಾಗಿ ಸಲ್ಲಿಸುತ್ತಿದ್ದ ಪುಟ್ಟಗಟ್ಟಲೆ ದಾಖಲಾತಿಗಳ ಪ್ರಕ್ರಿಯೆಯನ್ನು ಈಗ ಕೈ ಬಿಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಮಾತ್ರ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಜಾಹೀರಾತಿನಲ್ಲಿ ಸೂಚಿಸಲಾದ ಪ್ರದೇಶ/ವ್ಯಾಪ್ತಿಯಲ್ಲಿ ಸೂಕ್ತ ಭೂಮಿಯ ಲಭ್ಯತೆ ಅತಿಮುಖ್ಯ ಅಗತ್ಯವಾಗಿದೆ. ಭೂಮಿ ಇಲ್ಲದವರೂ ಅರ್ಜಿ ಸಲ್ಲಿಸಬಹುದಾಗಿದೆ. ಇದೇ ಮೊದಲ ಬಾರಿಗೆ, ಗಣಕೀಕೃತ ಬಿಡ್ ತೆರೆಯಲಾಗುತ್ತದೆ. ಹೆಚ್ಚು ಪಾರದರ್ಶಕತೆ ತರಲು ಇದನ್ನು ಸ್ವತಂತ್ರ ಸರಕಾರಿ ಸಂಸ್ಥೆಯಿಂದ(ಎನ್‌ಐಸಿ/ಎಂಎಸ್‌ಟಿಸಿ) ಮಾಡಿಸಲಾಗುತ್ತಿದೆ. ಎಲ್ಲ ರೀಟೈಲ್ ಔಟ್‌ಲೆಟ್‌ಗಳನ್ನು ಆಟೋಮೇಷನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾಗುತ್ತದೆ ಎಂದು ಪ್ರಮೋದ್ ತಿಳಿಸಿದರು.

ರೀಟೈಲ್ ಔಟ್‌ಲೆಟ್ ಡೀಲರ್‌ಶಿಪ್ ಉದ್ದಿಮೆದಾರರಿಗೆ ಒಂದು ಉತ್ತಮ ಅವಕಾಶ ಒದಗಿಸುತ್ತದೆ ಮತ್ತು ಅದೃಷ್ಟ ತರುವ 500 ಕಂಪೆನಿಗಳೊಂದಿಗೆ ಸಂಪರ್ಕ ಬೆಳೆಸುವ ಅವಕಾಶವನ್ನೂ ಒದಗಿಸುತ್ತದೆ. ಆಸಕ್ತ ಉದ್ದಿಮೆದಾರರು ನಮ್ಮ ವೆಬ್‌ಸೈಟ್ www.petrolpumpdealerchayan.in ನಲ್ಲಿ ಲಭ್ಯವಿರುವ ಸವಿವರವಾದ ಜಾಹೀರಾತು ಮತ್ತು ಕೈಪಿಡಿಗಳನ್ನು ನೋಡಬಹುದಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ (ಎಚ್‌ಪಿಸಿ)ನ ಡಿಜಿಎಂ ಶುಭಂಕರ್ ದತ್ತಾ, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್‌ನ ರಾಜ್ಯ ಮುಖ್ಯಸ್ಥ ರಾಹುಲ್ ತಂಡನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News