×
Ad

ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಿಗಿ ಪೊಲೀಸ್ ಭದ್ರತೆ

Update: 2018-11-25 20:20 IST

ಬೆಂಗಳೂರು, ನ.25: ಹಿರಿಯ ನಟ ಅಂಬರೀಷ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಕಂಠೀರವ ಕ್ರೀಡಾಂಗಣಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ರವಿವಾರ ಬೆಳಗ್ಗೆಯಿಂದಲೇ ದೊಡ್ಡ ಸಂಖ್ಯೆಯ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಅಂಬರೀಷ್ ಅವರ ಅಂತಿಮ ದರ್ಶನ ಪಡೆದರೆ, ಸಿನಿಮಾ ರಂಗ, ರಾಜಕೀಯ ಗಣ್ಯರು ಮತ್ತೊಂದು ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು. ಗಣ್ಯ ವ್ಯಕ್ತಿಗಳು ಕಠೀರವ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಂತೆಯೇ ಪೊಲೀಸರು ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಇಡಲಾಗಿದ್ದ ಜಾಗದ ಕಡೆಗೆ ತೆರಳಲು ಅನುವು ಮಾಡಿಕೊಡುತ್ತಿದ್ದರು. ಅದೇ ರೀತಿಯಾಗಿ ಅಭಿಮಾನಿಗಳೂ ಪೊಲೀಸ್ ಭದ್ರತೆಯ ನಡುವೆಯೇ ಸರತಿ ಸಾಲಿನಲ್ಲಿ ದರ್ಶನ ಪಡೆದರು.

ಬೆಳಗ್ಗೆ 10ಗಂಟೆಗೆ ಗಣ್ಯ ವ್ಯಕ್ತಿಗಳಿಗೆ ಕ್ರೀಡಾಂಗಣದ ಒಳ ಹೋಗಲು ಮೀಸಲಿರಿಸಿದ್ದ ಜಾಗಕ್ಕೆ ಅಂಬರೀಷ್ ಅಭಿಮಾನಿಗಳು ದಿಢೀರ್ ಎಂದು ಆಗಮಿಸಿದ್ದರಿಂದ ಕೆಲ ಕಾಲ ಸ್ಥಳದಲ್ಲಿ ಗದ್ದಲವುಂಟಾದರೂ ಸ್ವಲ್ಪ ಹೊತ್ತಿನಲ್ಲಿಯೇ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿದರು. ಸರತಿ ಸಾಲಿನಲ್ಲಿ ನಿಂತು ಒಳಹೋದ ಅಭಿಮಾನಿಗಳು ಹಾಗೂ ಗಣ್ಯ ವ್ಯಕ್ತಿಗಳು ಕ್ರೀಡಾಂಗಣದ ಒಳಗಡೆಯೇ ಬಹಳ ಹೊತ್ತು ಸೇರಿಕೊಂಡಿದ್ದರಿಂದ ಕ್ರೀಡಾಂಗಣ ತುಂಬಿ ಹೋಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಕ್ರೀಡಾಂಗಣದ ಸ್ಥಳಕ್ಕೆ ಆಗಮಿಸಿ ಸ್ಥಳವನ್ನು ಪರಿಶೀಲನೆ ನಡೆಸುತ್ತಿದ್ದರು.

ಮಂಡ್ಯಕ್ಕೆ ಮೃತದೇಹ ರವಾನೆ: ಅಂಬರೀಷ್ ಅವರ ಮೃತದೇಹವನ್ನು ಮಧ್ಯಾಹ್ನ 4ಗಂಟೆ ಸುಮಾರಿಗೆ ಅಂಬುಲೆನ್ಸ್ ಮೂಲಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಯಿತು. ಅಲ್ಲಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಮಂಡ್ಯಕ್ಕೆ ತೆಗೆದುಕೊಂಡು ಹೋಗಲಾಯಿತು. ಜೊತೆಗೆ ಕುಟುಂಬಸ್ಥರಿಗಾಗಿ ಮತ್ತೆರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತ್ತು.

ಅಂಬರೀಷ್ ಅವರ ಮೃತದೇಹ ಸಂಜೆ 5ಕ್ಕೆ ಮಂಡ್ಯ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ ತಲುಪಿತು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಅಂಬರೀಷ್ ಅವರ ಪಾರ್ಥಿವ ಶರೀರಕ್ಕೆ ಜಯಘೋಷಗಳನ್ನು ಹಾಕಿ, ಅಂತಿಮ ದರ್ಶನಕ್ಕೆ ಮುಗಿಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News