ಶ್ರಮಪಟ್ಟು ಮೇಲೆ ಬಾ ಎಂದಿದ್ದ ಅಂಬಿ ಸರ್

Update: 2018-11-25 18:34 GMT

ಮಾನ್ಯರೇ,

ನನಗಿನ್ನೂ ನೆನಪಿದೆ. 1995ರಲ್ಲಿ ಚಿಂತಾಮಣಿ ಕಾಲೇಜಿನಲ್ಲಿ ಅಂತಿಮ ಪದವಿ ಓದುತ್ತಿದ್ದ ಸಂದರ್ಭ ಅದು. ಅಂದು ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಎಲ್ಲ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ, ಈ ಚರ್ಚಾ ಸ್ಪರ್ಧೆಯ ಹಿಂದಿನ ದಿನ ರಾತ್ರಿಯಿಡೀ ತೋಟದಲ್ಲಿ ನೀರು ಹಾಯಿಸಿದ್ದರಿಂದ ಸ್ಪರ್ಧೆಯಲ್ಲಿ ಭಾಗವಹಿಸುವುದು ಬೇಡ ಎಂದು ನಿರ್ಧರಿಸಿದ್ದೆ. ನಾನು ಕಾಲೇಜಿಗೆ ಬರುವಷ್ಟರಲ್ಲಿ ಸ್ನೇಹಿತರು ನನ್ನ ಹೆಸರನ್ನು ಸ್ಪರ್ಧೆಯ ಪಟ್ಟಿಯಲ್ಲಿ ಸೇರಿಸಿದ್ದರು. ನನಗೋ ಕೈಕಾಲು ನೋವು ಮಾತನಾಡುವ ಮನಸ್ಸಿಲ್ಲ. ಸ್ನೇಹಿತರ ಒತ್ತಾಯಕ್ಕೆ ಮಣಿದು ವೇದಿಕೆಯೇರಿ ಚರ್ಚಾಸ್ಪರ್ಧೆಯಲ್ಲಿ ಮಾತಾಡಿದೆ. ಆ ಸ್ಪರ್ಧೆಯ ಬಹುಮಾನ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆ ಕ್ಷಣ ನನಗಾದ ಸಂತೋಷ ಅಷ್ಟಿಷ್ಟಲ್ಲ. ಬಹುಮಾನ ಪಡೆದದ್ದು ಆನಂದ ಒಂದು ಕಡೆಯಾದರೆ, ಕನ್ನಡದ ಪ್ರಖ್ಯಾತ ನಟ ಅಂಬರೀಷ್ ಅವರಿಂದ ಬಹುಮಾನ ಸ್ವೀಕರಿಸುತ್ತಿರುವುದು ಆ ಖುಷಿಯನ್ನು ನೂರ್ಮಡಿಗೊಳಿಸಿತ್ತು. ಅಂದು ಪ್ರಶಸ್ತಿ ವಿತರಣೆ ಸಮಾರಂಭಕ್ಕೆ ಅಂಬರೀಷ್‌ರವರು ಮುಖ್ಯ ಅತಿಥಿಯಾಗಿದ್ದರು. ಬಹುಮಾನ ಸ್ವೀಕರಿಸಲು ವೇದಿಕೆಯೇರಿದಾಗ ಅಂಬರೀಷ್ ಅವರು ಹಸ್ತಲಾಘವ ಮಾಡಿ, ಶ್ರಮಪಟ್ಟು ಮೇಲೆ ಬಾ ಎಂದು ಹೇಳಿ ಪ್ರಶಸ್ತಿಯನ್ನು ನೀಡಿದ್ದರು. ಅಂದು ಅವರು ಹೇಳಿದ ಮಾತು ಈಗಲೂ ನನಗೆ ಮಾರ್ಗದರ್ಶಕ. ಅನುಕರಣೀಯ ಹಾಗೂ ದಾರಿದೀಪ. ಅಂದು ನಾನು ಆ ಸ್ಪರ್ಧೆಯಲ್ಲಿ ಭಾಗವಹಿಸದಿದ್ದರೆ ನನ್ನ ಜೀವನದ ಅಮೂಲ್ಯವಾದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೆ. ಇಂದು ಅಂಬರೀಷ್ ಅವರು ಇನ್ನಿಲ್ಲ ಎನ್ನುವ ಸಂಗತಿ ತಿಳಿದು ಮನಸ್ಸಿಗೆ ಬಹಳ ದುಃಖವಾಗಿದೆ. ಅವರ ಕುಟುಂಬವರ್ಗದವರಿಗೆ ಹಾಗೂ ಸಮಸ್ತ ಅಭಿಮಾನಿ ಬಳಗಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.  

Writer - ತಳಗವಾರ ಆನಂದ್

contributor

Editor - ತಳಗವಾರ ಆನಂದ್

contributor

Similar News