ರಾಹುಲ್ ಗಾಂಧಿ ಕಾಶ್ಮೀರಿ ಬ್ರಾಹ್ಮಣ ಎಂದ ರಾಜಸ್ಥಾನ ದೇವಳದ ಅರ್ಚಕ

Update: 2018-11-27 09:48 GMT

ಜೈಪುರ್, ನ.27: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ದತ್ತಾತ್ರೇಯ’ ಗೋತ್ರದವರು ಹಾಗೂ ಅವರು ಕಾಶ್ಮೀರಿ ಬ್ರಾಹ್ಮಣ ಎಂದು ಇಲ್ಲಿನ ಖ್ಯಾತ ಪುಷ್ಕರ್ ಸರೋವರ ಸಮೀಪದ ದೇವಸ್ಥಾನದ ಅರ್ಚಕರೊಬ್ಬರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ರಾಹುಲ್ ಸೋಮವಾರ ಈ ನಿರ್ದಿಷ್ಟ ದೇವಳಕ್ಕೆ ಭೇಟಿ ನೀಡಿದ್ದರು.

‘‘ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಸಂಜಯ್ ಗಾಂಧಿ, ಮೇನಕ ಗಾಂಧಿ ಹಾಗೂ ಸೋನಿಯಾ ಗಾಂಧಿ ಕೂಡ ಇಲ್ಲಿನ ಘಾಟ್‌ಗೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅದಕ್ಕೆ ನಮ್ಮ ಬಳಿ ದಾಖಲೆಯಿದೆ’’ ಎಂದು ಅರ್ಚಕ ದೀನಾನಾಥ್ ಕೌಲ್ ಹೇಳಿದ್ದಾರೆ.

ತಮ್ಮ ಪೂರ್ವಜರು ಜವಾಹರಲಾಲ್ ನೆಹರೂ ಹಾಗೂ ಅವರ ತಂದೆ ಮೋತಿಲಾಲ್ ನೆಹರೂ ಅವರಿಗಾಗಿ ಪುಷ್ಕರ್ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು ಎಂದೂ ಕೌಲ್ ಹೇಳಿಕೊಂಡಿದ್ದಾರೆ.

‘‘ಅವರು (ರಾಹುಲ್) ಘಾಟ್‌ಗೆ ಬಂದು ಪ್ರಾರ್ಥನೆ ಸಲ್ಲಿಸಿದರು. ತಮ್ಮ ಗೋತ್ರ ದತ್ತಾತ್ರೇಯ ಎಂದು ಹೇಳಿದರು, ದತ್ತಾತ್ರೇಯ ಎಂದರೆ ಕೌಲ್ ಹಾಗೂ ಕೌಲ್‌ಗಳು ಕಾಶ್ಮೀರಿ ಬ್ರಾಹ್ಮಣರು’’ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ‘ಜನಿವಾರಧಾರಿ ಬ್ರಾಹ್ಮಣ’ ಎಂದು ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಅವರ ದೇವಳ ಭೇಟಿಗಳನ್ನು ಸಮರ್ಥಿಸಿ ಕಾಂಗ್ರೆಸ್ ನೀಡಿದ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕೇಳಿದ ಪ್ರಶ್ನೆಗೆ ಈ ಅರ್ಚಕರು ನೀಡಿದ ಮಾಹಿತಿಯಿಂದ ಉತ್ತರ ದೊರೆತಂತಾಗಿದೆ.

‘‘ರಾಹುಲ್ ಗಾಂಧಿ ಜನಿವಾರ ಧರಿಸುತ್ತಾರೆ, ಅದು ಯಾವ ವಿಧದ ಜನಿವಾರ ಎಂದು ನಾವು ಕೇಳಬೇಕು. ನಿಮ್ಮ ಗೋತ್ರವೇನು?’’ ಎಂದು ಮಧ್ಯ ಪ್ರದೇಶದಲ್ಲಿ ನಡೆದ ಚುನಾವಣಾ ಸಭೆಯೊಂದರಲ್ಲಿ ಸಂಬಿತ್ ಪಾತ್ರ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News