×
Ad

ರೈತರ ಡೆಲ್ಲಿ ಚಲೋಗೆ ಜನವಾದಿ ಮಹಿಳಾ ಸಂಘಟನೆ ಬೆಂಬಲ: ರೈತರಿಗಾಗಿ ಮಹಿಳೆಯರು-ಪೋಸ್ಟರ್ ಬಿಡುಗಡೆ

Update: 2018-11-27 21:13 IST

ಬೆಂಗಳೂರು, ನ.27: ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ನ.29, 30ರಂದು ದೇಶಾದ್ಯಂತ ನಡೆಯುತ್ತಿರುವ ರೈತರ ಡೆಲ್ಲಿ ಚಲೋದಲ್ಲಿ ಪಾಲ್ಗೊಂಡು ಸಂಸತ್ ಮುತ್ತಿಗೆ ಹಾಕುತ್ತೇವೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಿಳಿಸಿದೆ.

ಮಂಗಳವಾರ ನಗರದ ಬಿಬಿಎಂಪಿ ಸರ್ಕಲ್‌ನಲ್ಲಿ ರೈತರಿಗಾಗಿ ಡೆಲ್ಲಿ ಚಲೋ ಬೆಂಬಲಿಸಿ, ರೈತರಿಗಾಗಿ ಮಹಿಳೆಯರು-ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ, ನ.30ರಂದು ಅಖಿಲ ಭಾರತ ಕೃಷಿ ಸಂಘರ್ಷ ಸಂಘಟನೆಗಳ ಸಮನ್ವಯ ಸಮಿತಿ ಸೇರಿದಂತೆ ರೈತ ಪರ ಸಂಘಟನೆಗಳ ನೇತೃತ್ವದಲ್ಲಿ ದೇಶಾದ್ಯಂತ ಲಕ್ಷಾಂತರ ರೈತರು ದೆಹಲಿ ಚಲೋದಲ್ಲಿ ಪಾಲ್ಗೊಂಡು ಸಂಸತ್ತು ಮುತ್ತಿಗೆ ಹಾಕಲಿದ್ದೇವೆ ಎಂದು ತಿಳಿಸಿದರು.

ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗೊತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತಿಲ್ಲ. ಹೀಗಾಗಿ, ರೈತರ ದೆಹಲಿ ಚಲೋಗೆ ನಮ್ಮ ಸಂಘಟನೆ ಕೈಜೋಡಿಸಿದೆ ಎಂದು ತಿಳಿಸಿದರು.

ಬಯಲು ಸೀಮೆಯ ಬರಪೀಡಿತ ರೈತರ ಭೂಮಿಗೆ ನೀರು ಒದಗಿಸಲು ಶಾಶ್ವತ ಯೋಜನೆ ರೂಪಿಸಬೇಕು. ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಬೇಕು ಹಾಗೂ ರೈತರ ಸಮಸ್ಯೆ ಪರಿಹಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದರು.

ಡಾ.ಎಂ.ಎಸ್.ಸ್ವಾಮಿನಾಥನ್ ನೇತೃತ್ವದ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಬೆಳೆಗಳ ಬೆಲೆ ನಿಗದಿ ಮಾಡುವುದರ ಮೂಲಕ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಅಲ್ಲದೆ, ರೈತರು ಮಾಡಿರುವ ಸಾಲ ಮನ್ನಾ ಮಾಡುವುದರ ಜತೆಗೆ ಬಡ್ಡಿ ರಹಿತ ಸಾಲ ನೀಡಬೇಕೆಂದು ಎಂದರು.

ನೈಸರ್ಗಿಕ ಏರುಪೇರು, ಸರಕಾರಗಳ ಆರ್ಥಿಕ ನೀತಿ ತಾಂತ್ರಿಕ ತೊಂದರೆಗಳು, ಹಣಕಾಸಿನ ಆಡಚಣೆ ಇತ್ಯಾದಿ ಆಪತ್ತುಗಳನ್ನು ಎದುರಿಸಲು ಪೂರ್ವ ಸಿದ್ಧತೆ ಹಾಗೂ ಅಗತ್ಯವಿರುವ ತುರ್ತು ನಿಧಿಯ ವ್ಯವಸ್ಥೆ ಹಾಗೂ ನೀರಾವರಿ, ವಿದ್ಯುತ್, ರಸ್ತೆ, ಸಂಸ್ಕರಣ ವ್ಯವಸ್ಥೆ, ಮೌಲ್ಯವರ್ಧನೆಗೆ ಪ್ರೋತ್ಸಾಹ, ಬೆಂಬಲ ಬೆಲೆ, ಶೀತಲೀಕರಣ, ಮಾರುಕಟ್ಟೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News