ಜ.8-9ಕ್ಕೆ ಸರಕಾರಿ ನೌಕರರ ಅಖಿಲ ಭಾರತ ಮುಷ್ಕರ

Update: 2018-11-27 15:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.27: ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡಬೇಕು, ನಿಶ್ಚಿತ ಪಿಂಚಣಿ ಯೋಜನೆ ಜಾರಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸಿ ಜ.8 ಮತ್ತು 9ರಂದು ಅಖಿಲ ಭಾರತ ಮುಷ್ಕರಕ್ಕೆ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ನಿರ್ಧರಿಸಿದೆ.

ಕಳೆದ ಎರಡು ದಿನಗಳಿಂದ ನಗರದ ಗಾಂಧಿ ಭವನದಲ್ಲಿ ನಡೆದ ಒಕ್ಕೂಟದ ಕಾರ್ಯಕಾರಣಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ನೌಕರರಿಗೆ ಈಗಿರುವ ಸರಕಾರದ ನಿಗದಿತ ಪಿಂಚಣಿ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದೆ.

ನೌಕರರು ಪಿಂಚಣಿಗಾಗಿ ತಮ್ಮ ಸಂಬಳದಿಂದ ಪ್ರತಿ ತಿಂಗಳು ಶೇ.10ರಷ್ಟನ್ನು ಹಾಗೂ ಸರಕಾರ ಅದಕ್ಕೆ ಸಮಾನ ಹಣವನ್ನು ವಂತಿಗೆಯಾಗಿ ನೀಡಲಾಗುತ್ತಿದೆ. ಸದರಿ ಹಣವನ್ನು ಫಂಡ್ ಮ್ಯಾನೇಜರ್‌ಗಳ ಮೂಲಕ ನಾನಾ ಖಾಸಗಿ ಹಣಕಾಸಿನ ಸಂಸ್ಥೆಗಳಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ನೀಡಲಾಗುತ್ತದೆ. ಅದರಿಂದ ಬಂದ ಲಾಭದಲ್ಲಿ 30-35 ವರ್ಷಗಳ ನಂತರ ಈ ಹಣವನ್ನು ಉಪಯೋಗಿಸಿದ ಕಂಪನಿಗಳು ನೌಕರರಿಗೆ ಪಿಂಚಣಿಯನ್ನು ನೀಡುತ್ತವೆ. ಆದರೆ ಈ ಕಂಪನಿಗಳು ಲಕ್ಷಾಂತರ ಕೋಟಿ ರೂ.ಗಳನ್ನು ಷೇರು ಮಾರುಕಟ್ಟೆಯಲ್ಲಿ ಜೂಜಾಟಕ್ಕೆ ತೊಡಗಿಸುವ ಖಾಸಗಿ ಹಣಕಾಸು ಸಂಸ್ಥೆಗಳು ನೌಕರರಿಗೆ ಪಿಂಚಣಿಯನ್ನು ಕೊಡುತ್ತವೆ ಎಂದು ಸಭೆ ಆಕ್ರೋಶ ವ್ಯಕ್ತಪಡಿಸಿದೆ.

ಖಾಸಗಿ ಕಂಪನಿಗಳು ನಷ್ಟ ಹೊಂದಿ, ಆರ್ಥಿಕವಾಗಿ ದಿವಾಳಿ ಹೊಂದಿವೆ. ಇದರಿಂದ ನೌಕರರು ತಮ್ಮ ಪಿಂಚಣಿ, ವಿಮೆ ಹಾಗೂ ಉಳಿತಾಯ ಹಣವನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇಳಿವಯಸ್ಸಿನಲ್ಲಿ ಸಾಮಾಜಿಕ ಭದ್ರತೆಗಾಗಿ ಹಿಂದೆ ಸರಕಾರವು ಆಯೋಜಿಸಿದ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು ಎಂದು ಕಾರ್ಯಕಾರಿಣಿ ಸಭೆಯಲ್ಲಿ ಆಗ್ರಹಿಸಿದರು.

ಸಭೆಯಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕರ್ನಾಟಕ ಒಕ್ಕೂಟದ ಉಪಾಧ್ಯಕ್ಷ ಎಂ. ವೆಂಕಟೇಶ್, ಸದಸ್ಯ ಗುರುಪ್ರಸಾದ್ ಹೊನ್ನಾಳಿ, ಕಾರ್ಯದರ್ಶಿ ಶೋಭಾ ಲೋಕನಾಗ್ ಮತ್ತಿತರರು ಉಪಸ್ಥಿತರಿದ್ದರು ಎಂದು ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News