ಮಾಣಿಪ್ಪಾಡಿ ಸಮಿತಿ ನೀಡಿದ್ದ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ: ಹೈಕೋರ್ಟ್‌ಗೆ ಸರಕಾರದ ಹೇಳಿಕೆ

Update: 2018-11-27 15:59 GMT

ಬೆಂಗಳೂರು, ನ.27: ವಕ್ಫ್ ಆಸ್ತಿ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸಮಿತಿ ನೀಡಿದ್ದ ವರದಿಯ ಶಿಫಾರಸುಗಳನ್ನು ಈಗಾಗಲೇ ಸದನದಲ್ಲಿ ಮಂಡಿಸಿದ್ದು, ಅವು ತಿರಸ್ಕೃತಗೊಂಡಿವೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ನ್ಯಾಯಾಲಯದ ಆದೇಶವಿದ್ದರೂ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸಲು ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಎಸ್.ಕೆ.ಕಾಂತಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು. ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಕಾಯ್ದೆ-1994ರ ಸೆಕ್ಷನ್ 10(2) ಪ್ರಕಾರ ಸಮಿತಿಯ ವರದಿಯನ್ನು ಸದನದಲ್ಲಿ ಮಂಡಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಆದರೆ, ಕಾಯ್ದೆಯ ಸೆಕ್ಷನ್ 10(2) ಅನುಸಾರ ಸಮಿತಿಯ ವರದಿಯಲ್ಲ, ವರದಿಯಲ್ಲಿನ ಶಿಫಾರಸುಗಳನ್ನಷ್ಟೇ ಮಂಡಿಸಬಹುದು. ಈಗಾಗಲೇ 2016ರ ಮಾ.3ರಂದೇ ಸರಕಾರ ಶಿಫಾರಸುಗಳನ್ನು ಸದನದಲ್ಲಿ ಮಂಡಿಸಿದೆ. ಹೀಗಾಗಿ, ಸರಕಾರ ಯಾವುದೆ ವರದಿಯನ್ನು ಮಂಡಿಸುವ ಪ್ರಶ್ನೆಯೆ ಇಲ್ಲ ಎಂದು ಪೀಠಕ್ಕೆ ವಿವರಣೆ ನೀಡಿದರು.

ಈ ಮೊದಲು ಸಲ್ಲಿಕೆಯಾಗಿದ್ದ ತಕರಾರು ಅರ್ಜಿಯಲ್ಲಿ ಅರ್ಜಿದಾರರು ವರದಿ ಮಂಡಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿದ್ದರು. ಆ ಕಾರಣದಿಂದ ಹೈಕೋರ್ಟ್ ಆದೇಶದಲ್ಲೂ ವರದಿ ಮಂಡಿಸುವಂತೆಯೇ ಉಲ್ಲೇಖವಾಗಿದೆ. ಹೀಗಾಗಿಯೇ ಆದೇಶ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯು ಬುಧವಾರ ವಿಶೇಷ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಅಲ್ಲಿ ಮಧ್ಯಂತರ ಆದೇಶಕ್ಕೆ ಮನವಿ ಮಾಡಲಾಗುವುದು. ಇದಕ್ಕಾಗಿ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಎಜಿ ಮನವಿ ಮಾನ್ಯ ಮಾಡಿದ ನ್ಯಾಯಪೀಠ, ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಿತು.

ಪ್ರಕರಣವೇನು: ವಕ್ಫ್ ಆಸ್ತಿ ಹಗರಣದ ಸಂಬಂಧ 2012ರಲ್ಲಿ ಅಂದಿನ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ವರದಿ ಸಲ್ಲಿದ್ದು, ಅದನ್ನು ಸದನದಲ್ಲಿ ಮಂಡಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮಾಜಿ ಸಚಿವ ಎಸ್.ಕೆ. ಕಾಂತಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ವರದಿಯನ್ನು 2016ರ ಫೆಬ್ರುವರಿಯಲ್ಲಿ ಸದನದಲ್ಲಿ ಮಂಡಿಸಲಾಗುವುದು ಎಂದು 2015ರ ಸೆ.10ರಂದು ಸರಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ನೀಡಿತ್ತು. ಇದರ ಆಧಾರದ ಅರ್ಜಿ ಇತ್ಯರ್ಥಪಡಿಸಲಾಗಿತ್ತು. ಆದರೆ, ಸರಕಾರ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಎಸ್.ಕೆ. ಕಾಂತಾ 2016ರಲ್ಲಿ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News