ಜನಾರ್ದನ ರೆಡ್ಡಿ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ಸೂಚನೆ

Update: 2018-11-27 16:02 GMT

ಬೆಂಗಳೂರು, ನ.27: ಆ್ಯಂಬಿಡೆಂಟ್ ಕಂಪೆನಿಯ ಬಹುಕೋಟಿ ವಂಚನೆ ಪ್ರಕರಣದ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಾರದೆಂದು ಹೈಕೋರ್ಟ್ ಸಿಸಿಬಿ ಪೊಲೀಸರಿಗೆ ಎಚ್ಚರಿಸಿದೆ.

ಎಫ್‌ಐಆರ್ ರದ್ದುಕೋರಿ ಜನಾರ್ದನರೆಡ್ಡಿ ಹಾಗೂ ಅಲಿಖಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ನ್ಯಾಯಪೀಠ, ಮಂಗಳವಾರ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ಬಹುಕೋಟಿ ವಂಚನೆ ಪ್ರಕರಣದಲ್ಲಿ ಅರ್ಜಿದಾರರು ಚಿಟ್‌ಫಂಡ್ ಕಾಯ್ದೆ ಉಲ್ಲಂಘನೆ ಆರೋಪಕ್ಕೆ ಒಳಪಡುವುದಿಲ್ಲ. ಪೊಲೀಸರು ದುರುದ್ದೇಶದಿಂದ ಸಿಲುಕಿಸಿದ್ದಾರೆ. ಹೀಗಾಗಿ, ಪ್ರಕರಣ ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಿಚಾರಣೆ ಡಿ.4ಕ್ಕೆ ಮುಂದೂಡಿ, ಅಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಸಿಸಿಬಿ ಪೊಲೀಸರಿಗೆ ನಿರ್ದೇಶಿಸಿತು. ಇದಕ್ಕೆ ಸಿಸಿಬಿ ಪರ ವಕೀಲರು, ಪ್ರಕರಣದ ಮತ್ತೊಬ್ಬ ಆರೋಪಿ ಅಲಿಖಾನ್ ಈಗಾಗಲೇ ಸಿಸಿಬಿ ವಶದಲ್ಲಿದ್ದಾರೆ. ನ.29ರಂದು ಅವರನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. 29ರ ನಂತರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆ್ಯಂಬಿಡೆಂಟ್ ಪ್ರಕರಣ ಸಂಬಂಧ ಹೈಕೋರ್ಟ್ ಸಿಸಿಬಿಗೆ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News