ನಟ ವಿನೋದ್ ರಾಜ್ ಹಣ ಕದ್ದವರ ಬಂಧನ
Update: 2018-11-27 21:39 IST
ಬೆಂಗಳೂರು, ನ.27: ನಟ ವಿನೋದ್ ರಾಜ್ ಸೇರಿದಂತೆ ಹಲವು ಜನರ ಗಮನ ಬೇರೆಡೆ ಸೆಳೆದು ಹಣ ಕಸಿದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನೆಲಮಂಗಲ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರ ಮೂಲದ ಅರ್ಜುನ್, ರಾಕೇಶ್, ಸುನೀಲ್, ರಾಕೇಶ್, ವಿಜಯ ಕುಮಾರ್ ಮತ್ತು ಭಾಸ್ಕರ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದ್ದು, ಪ್ರಕರಣ ಸಂಬಂಧ ಇನ್ನೂ ಮೂರು ಮಂದಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬಂಧಿತರು ಬ್ಯಾಂಕ್‌ಗಳಿಂದ ಹಣ ತೆಗೆದುಕೊಂಡು ಬರುವವರನ್ನೇ ಗುರಿಯಾಗಿಸಿಕೊಂಡು, ಅವರ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದರು. ಇತ್ತೀಚಿಗೆ ನಟ ವಿನೋದ್ ರಾಜ್ ಅವರ ಬಳಿಯೂ ಇದೇ ರೀತಿ ಅಭಿಮಾನಿ ಎಂದು ಸುಳ್ಳು ಹೇಳಿ 1 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದರು.
ಬಂಧಿತರಿಂದ ಪೊಲೀಸರು ಒಟ್ಟು 8 ಲಕ್ಷ ರೂ. ಹಣ ಮತ್ತು 3 ಬೈಕ್‌ಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ನಟ ವಿನೋದ್ ರಾಜ್ ಅವರಿಗೆ ಸೇರಿದ 1 ಲಕ್ಷ ರೂ. ನಗದು ಇದೆ ಎಂದು ತಿಳಿದುಬಂದಿದೆ.