ನ.28 ರಂದು ಜಾಫರ್ ಶರೀಫ್ ನಿವಾಸಕ್ಕೆ ಪ್ರಣಬ್ ಮುಖರ್ಜಿ ಭೇಟಿ
ಬೆಂಗಳೂರು, ನ.27: ರವಿವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿವಾಸಕ್ಕೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.
ಮೌಲಾನ ಅಬುಲ್ ಕಲಾಮ್ ಆಝಾದ್ ಅವರ ' ಇಂಡಿಯಾ ವಿನ್ಸ್ ಫ್ರೀಡಂ' ಆಂಗ್ಲ ಕೃತಿಯನ್ನು ಜಾಫರ್ ಶರೀಫ್ ಉರ್ದು ಭಾಷೆಗೆ ತರ್ಜುಮೆ ಮಾಡಿಸಿದ್ದರು. ಆ ಪುಸ್ತಕದ ಲೋಕಾರ್ಪಣೆ ಸಮಾರಂಭವನ್ನು ನ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಪ್ರಣವ್ ಮುಖರ್ಜಿಯನ್ನು ಪುಸ್ತಕದ ಲೋಕಾರ್ಪಣೆಗೆ ಆಹ್ವಾನ ನೀಡಲಾಗಿತ್ತು. ಆದರೆ, ದುರಾದೃಷ್ಟವಶಾತ್ ಪುಸ್ತಕದ ಲೋಕಾರ್ಪಣೆಗೆ ಮುನ್ನ ಜಾಫರ್ ಶರೀಫ್ ಇಹಲೋಕ ತ್ಯಜಿಸಿದರು.
ಈ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಂತೆ ಪ್ರಣವ್ ಮುಖರ್ಜಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಜಾಫರ್ ಶರೀಫ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಝಮೀರ್ ಅಹ್ಮದ್ ಖಾನ್, ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಸಿ.ಎಂ.ಇಬ್ರಾಹೀಂ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದು ಜಾಫರ್ ಶರೀಫ್ ಕುಟುಂಬದ ಮೂಲಗಳು ತಿಳಿಸಿವೆ.