ರಾಜ್ಯದಲ್ಲಿ ಶೇ.20 ರಷ್ಟು 15 ವರ್ಷಕ್ಕಿಂತ ಹಳೆಯ ವಾಹನಗಳು !

Update: 2018-11-27 16:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.27: ಕರ್ನಾಟಕದಲ್ಲಿ ಇದುವರೆಗೂ ನೋಂದಣಿಯಾದ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಶೇ.20 ರಷ್ಟು ವಾಹನಗಳು 15 ವರ್ಷಕ್ಕಿಂತ ಹಳೆಯದ್ದಾಗಿವೆ.

2017-18ರವರೆಗೆ ರಾಜ್ಯದಲ್ಲಿ ಒಟ್ಟಾರೆ 1.93 ಕೋಟಿ ವಿವಿಧ ಪ್ರಕಾರದ ವಾಹನಗಳು ನೋಂದಣಿಯಾಗಿವೆ. ಅದರಲ್ಲಿ ಬಸ್, ಖಾಸಗಿ ಸೇವಾ ವಾಹನ, ಶಿಕ್ಷಣ ಸಂಸ್ಥೆಗಳು ಖರೀದಿಸಿರುವ ವಾಹನಗಳು ಒಂದು ಲಕ್ಷದಷ್ಟಿವೆ. ಅದರಲ್ಲಿ 21 ಸಾವಿರ ವಾಹನಗಳು 15 ವರ್ಷ ಮೇಲ್ಪಟ್ಟು ಹಳೆಯದಾಗಿವೆ. ಸಾವಿರಾರು ಕಿ.ಮೀ. ಸಂಚಾರ ಮಾಡಿ, ಇದೀಗ ಅಪಾಯದ ಸ್ಥಿತಿಯಲ್ಲಿವೆ.

ಕೆಎಸ್ಸಾರ್ಟಿಸಿ ವಾಹನಗಳು ಸರಿಯಾದ ನಿರ್ವಹಣೆಯ ನಡುವೆಯೂ 10 ವರ್ಷ ಮೀರಿದರೆ ಅಂತಹ ವಾಹನಗಳನ್ನು ಗುಜರಿಗೆ ಹಾಕಿ, ಹೊಸ ವಾಹನಗಳನ್ನು ಖರೀದಿ ಮಾಡಲಾಗುತ್ತದೆ. ಆದರೆ, ಖಾಸಗಿ ಬಸ್‌ಗಳಿಗೆ ಯಾವುದೇ ಮಾನದಂಡಗಳಿಲ್ಲ. ಹೀಗಾಗಿ, ನಿಯಮವಿಲ್ಲದೆ ಎಷ್ಟು ವರ್ಷಗಳು ಬೇಕಾದರೂ ಅದನ್ನು ಚಲಾವಣೆ ಮಾಡುತ್ತಾರೆ. ಅಲ್ಲದೆ, ಅದಕ್ಕೆ ಸಾರಿಗೆ ಇಲಾಖೆ ಅರ್ಹತಾ ಪ್ರಮಾಣ ಪತ್ರವನ್ನೂ ನೀಡುತ್ತಿದೆ.

ಸಾಮಾನ್ಯವಾಗಿ ಯಾವುದೇ ಕಂಪೆನಿಯ ಬಸ್‌ಗಳಾದರೂ ಅದರ ಗರಿಷ್ಠ ಮಿತಿ 12-15 ವರ್ಷ. ಅನಂತರ ಎಂಜಿನ್ ಸವೆಯುತ್ತದೆ ಹಾಗೂ ಕಾರ್ಯಕ್ಷಮತೆಯೂ ಕಳೆದುಕೊಳ್ಳುತ್ತದೆ. ಹೆಚ್ಚು ನಿರ್ವಹಣಾ ವೆಚ್ಚಕ್ಕೂ ಕಾರಣವಾಗುತ್ತದೆ. ಅಲ್ಲದೆ, ಮಾಲಿನ್ಯ ಉಂಟು ಮಾಡುತ್ತದೆ. ಆದರೂ, ಅದನ್ನು ನಿಲ್ಲಿಸಲು ಮಾಲಕರು ನಿರಾಕರಣೆ ಮಾಡುತ್ತಿರುವುದು ದುರಂತವೇ ಸರಿ. ಇದರಿಂದಾಗಿ ಮಾರಣ ಹೋಮವೇ ನಡೆಯುತ್ತಿರುವ ಉದಾಹರಣೆಗಳಿವೆ.

ನೀತಿ ರೂಪಿಸುವ ಅಗತ್ಯವಿದೆ: ಬಸ್‌ಗಳಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರ ಹಿತ ದೃಷ್ಟಿಯಿಂದ ಖಾಸಗಿ ವಾಹನಗಳಿಗೆ ನಿಯಂತ್ರಣ ಹಾಕುವ ನೀತಿ ರೂಪಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ದುರಂತಗಳನ್ನು ತಡೆಯಲು ಮುಂದಾಗಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ದಿಲ್ಲಿಯಲ್ಲಿ 15 ವರ್ಷದ ಮೇಲಿನ ವಾಹನಗಳಿಗೆ ನಿಷೇಧ ಹೇರಲಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ಜಾರಿಯಾಗಬೇಕಾದ ಅಗತ್ಯವಿದೆ. ಹಣದ ಆಸೆಗಾಗಿ ಖಾಸಗಿ ವಾಹನಗಳ ಮಾಲಕರು ಜನರ ಪ್ರಾಣವನ್ನೂ ಲೆಕ್ಕಿಸುತ್ತಿಲ್ಲ. ಹೀಗಾಗಿ, ಒಂದು ಮಿತಿ ನಿಗದಿ ಮಾಡಿ ಮುಂದಿನ ದಿನಗಳಲ್ಲಾದರೂ ಅಪಾಯಗಳನ್ನು ತಡೆಯಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಯಾವ ವಾಹನಗಳು ಎಷ್ಟು?

ಖಾಸಗಿ ಬಸ್: 13,125

ಒಪ್ಪಂದದ ವಾಹನ: 1,430

ಖಾಸಗಿ ಸೇವಾ ವಾಹನ: 4,071

ಶಾಲಾ ವಾಹನ: 2,028

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News