ಕೋಟ್ಯಾಂತರ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಆರೆಸ್ಸೆಸ್‌ಗೆ ದಾನ ಮಾಡಿದ ಮಾಜಿ ಎಸ್ಪಿ ನಾಯಕ ಅಮರ್‌ಸಿಂಗ್

Update: 2018-11-29 18:38 GMT

ಲಕ್ನೊ, ನ.29: ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್‌ಸಿಂಗ್ ತನಗೆ ಪಿತ್ರಾರ್ಜಿತವಾಗಿ ಬಂದ ಸುಮಾರು 15 ಕೋಟಿ ರೂ. ಮೌಲ್ಯದ ಆಸ್ತಿಯ ಒಂದಂಶವನ್ನು ಆರೆಸ್ಸೆಸ್‌ಗೆ ಸಂಯೋಜನೆಗೊಂಡಿರುವ ‘ಸೇವಾ ಭಾರತಿ’ ಎಂಬ ಸಂಸ್ಥೆಗೆ ದಾನ ನೀಡಿದ್ದಾರೆ.

 ಉತ್ತರಪ್ರದೇಶದ ಅಝಮ್‌ಗಢ ಜಿಲ್ಲೆಯ ತರ್ವಾನ್ ಗ್ರಾಮದಲ್ಲಿರುವ 4 ಕೋಟಿ ರೂ. ಮೌಲ್ಯದ ಮನೆ, 10 ಕೋಟಿ ರೂ. ಮೌಲ್ಯದ 10 ಬಿಘ ಜಮೀನು ಅಮರ್‌ಸಿಂಗ್‌ಗೆ ಪಿತ್ರಾರ್ಜಿತವಾಗಿ ಬಂದಿದ್ದು, ಅದರ ಒಂದಂಶವನ್ನು ಸೇವಾ ಭಾರತಿಗೆ ದಾನವಾಗಿ ನೀಡಿದ್ದಾರೆ.

ತನ್ನ ರಾಜಕೀಯ ಬದುಕಿನುದ್ದಕ್ಕೂ ಆರೆಸ್ಸೆಸ್ ಅನ್ನು ಕೋಮುವಾದಿ ಸಂಘಟನೆ ಎಂದು ವಿರೋಧಿಸುತ್ತಲೇ ಬಂದು, ಇದೀಗ ಕೋಟ್ಯಂತರ ರೂಪಾಯಿ ವೌಲ್ಯದ ಆಸ್ತಿಯನ್ನು ಆರೆಸ್ಸೆಸ್ ಗೆ ದಾನ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ನಿಧನರಾಗಿರುವ ತನ್ನ ತಂದೆಯ ಸ್ಮರಣಾರ್ಥ ಹಾಗೂ ಆರೆಸ್ಸೆಸ್ ಮಾಡುತ್ತಿರುವ ಸಮಾಜ ಸೇವೆಯನ್ನು ಪರಿಗಣಿಸಿ ಹೀಗೆ ಮಾಡಿರುವುದಾಗಿ ತಿಳಿಸಿದ್ದಾರೆ.

  ಆರೆಸ್ಸೆಸ್ ಸಂಘಟನೆಯ ಬೆಂಬಲದಿಂದ ತಾನು ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂಬ ಕೆಲವು ರಾಜಕೀಯ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲವೆಂದು ಇದೇ ಸಂದರ್ಭ ಅವರು ತಿಳಿಸಿದ್ದಾರೆ. ರಾಮಮಂದಿರ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಈಗಾಗಲೇ ದೇವಾಲಯವಿದೆ. ಇದೀಗ ಆ ದೇವಾಲಯವನ್ನು ರಾಮನ ಘನತೆಗೆ ತಕ್ಕಂತೆ ಭವ್ಯವಾಗಿಸುವ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದರು.

  ಮುಲಾಯಂ ಸಿಂಗ್ ಅಧಿಕಾರಾವಧಿಯಲ್ಲಿ ಉತ್ತರಪ್ರದೇಶದಲ್ಲಿ ಪ್ರಮುಖ ಮುಖಂಡನಾಗಿ ಗುರುತಿಸಿಕೊಂಡಿದ್ದ ಅಮರ್‌ಸಿಂಗ್, ಭಿನ್ನಾಭಿಪ್ರಾಯದ ಕಾರಣ 2010ರಲ್ಲಿ ಪಕ್ಷದಿಂದ ದೂರವಾಗಿದ್ದರು. ಬಳಿಕ ರಾಷ್ಟ್ರೀಯ ಲೋಕಮಂಚ ಪಕ್ಷವನ್ನು ಆರಂಭಿಸಿದ್ದ ಅಮರ್ ಸಿಂಗ್, 2012ರ ಉ.ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 360 ಸ್ಥಾನಗಳಿಗೂ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಒಂದೂ ಸ್ಥಾನದಲ್ಲಿ ಗೆಲುವು ಪಡೆದಿರಲಿಲ್ಲ. ತಾನೂ ಸೋತ ಕಾರಣ ಅವರು ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಆದರೆ ನಂತರ 2016ರಲ್ಲಿ ಮತ್ತೆ ಸಮಾಜವಾದಿ ಪಕ್ಷಕ್ಕೆ ಸೇರಿದ್ದ ಅಮರ್‌ಸಿಂಗ್‌ರನ್ನು ಅಖಿಲೇಶ್ ಯಾದವ್ ಪಕ್ಷದಿಂದ ಉಚ್ಛಾಟಿಸಿದ್ದರು. 2016ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News