‘ಕೈ’ ಶಾಸಕರು ಮುಂಬೈಗೆ ತೆರಳಿದ್ದಾರೆಂಬುದು ಸುಳ್ಳು: ದಿನೇಶ್ ಗುಂಡೂರಾವ್ ಸ್ಪಷ್ಟನೆ
ಬೆಂಗಳೂರು, ನ. 30: ನಮ್ಮ ಪಕ್ಷದ ಕೆಲಸ ಶಾಸಕರು ಮುಂಬೈಗೆ ಹೋಗಿದ್ದಾರೆಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದೆಲ್ಲ ಆಧಾರ ರಹಿತ, ಸುಳ್ಳು ಸುದ್ದಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿನಿಗಳೊಂದಿಗೆ ಮಾತನಾಡಿದ ಅವರು, ಹತ್ತು ಮಂದಿ ಶಾಸಕರಲ್ಲ, 50 ಮಂದಿ ಶಾಸಕರು ಎಲ್ಲಿಗೆ ಹೋದರೂ ನಮ್ಮದೇನೂ ಅಭ್ಯಂತರವಿಲ್ಲ. ನಮ್ಮ ಶಾಸಕರ ಮೇಲೆ ನಮಗೆ ನಂಬಿಕೆ ಇದೆ ಎಂದು ನುಡಿದರು.
ಮುಂಬೈಗೆ ತೆರಳಿದ್ದಾರೆಂಬ ಹತ್ತು ಮಂದಿ ಶಾಸಕರ ಪೈಕಿ ಬಿ.ಸಿ.ಪಾಟೀಲ್ ಅವರ ಹೆಸರು ಸೇರಿದೆ. ಆದರೆ, ಅವರು ಇಲ್ಲೆ ಇದ್ದಾರೆ. ಈಗಷ್ಟೇ ನಾನು ಅವರೊಂದಿಗೆ ಮಾತನಾಡಿದ್ದೇನೆ. ಯಾರೂ ಎಲ್ಲಿಗೂ ಹೋಗುವುದಿಲ್ಲ. ಅಂತಹ ಯಾವುದೇ ಪರಿಸ್ಥಿತಿ ಉದ್ಭವಿಸುವುದು ಇಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೂ ಮೊದಲೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಈ ಸಂಬಂಧ ಈಗಾಗಲೇ ಚರ್ಚಿಸಿದ್ದು, ಉಸ್ತುವಾರಿ ವೇಣುಗೋಪಾಲ್ ಅವರು ಬೆಂಗಳೂರಿಗೆ ಬಂದ ಬಳಿಕ ದಿನಾಂಕ ನಿಗದಿ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ವಿಪಕ್ಷ ನಾಯಕ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಅದಕ್ಕೆ ರಾಜಕೀಯ ಬಣ್ಣ ಹಚ್ಚುವ ಅವಶ್ಯಕತೆ ಇಲ್ಲ. ಮನೆಗೆ ಹೋದ ಕೂಡಲೇ ಪಕ್ಷಕ್ಕೆ ಸೇರುತ್ತಾರೆ, ಪಕ್ಷ ತೊರೆಯಲಿದ್ದಾರೆಂಬುದು ಸುಳ್ಳು’
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ