ರಾಜ್‌ಕುಮಾರ್ ಹೆಸರಲ್ಲಿ ರಾಮನಗರದಲ್ಲಿ ಚಿತ್ರರಂಗ ವಿವಿ: ಸಿಎಂ ಕುಮಾರಸ್ವಾಮಿ
ಬೆಂಗಳೂರು, ನ.30: ರಾಮನಗರ ಜಿಲ್ಲೆಯಲ್ಲಿ ಚಿತ್ರರಂಗ ವಿಶ್ವವಿದ್ಯಾಲಯ ಸ್ಥಾಪಿಸುವ ಬಯಕೆ ಇದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರೋದ್ಯಮ ಆಯೋಜಿಸಿದ್ದ, ಡಾ.ಅಂಬರೀಷ್ ಅವರ ಗೌರವಾರ್ಥ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೆರೆ ರಾಜ್ಯಗಳಲ್ಲಿ ಇರುವಂತೆ ನಿಪುಣ ತಂತ್ರಜ್ಞರನ್ನು ಸಜ್ಜುಗೊಳಿಸುವ ಅಗತ್ಯ ಕನ್ನಡ ಚಿತ್ರರಂಗಕ್ಕೆ ಇದೆ. ಅದಕ್ಕಾಗಿ ರಾಮನಗರದಲ್ಲಿ ಚಿತ್ರರಂಗದ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ಈ ವಿಶ್ವವಿದ್ಯಾಲಯಕ್ಕೆ ಡಾ.ರಾಜ್‌ಕುಮಾರ್ ಅವರ ಹೆಸರಿಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಡಾ.ರಾಜ್‌ಕುಮಾರ್ ಅಗಲಿದರು. ಆ ಸುದ್ದಿಯನ್ನು ಆಸ್ಪತ್ರೆಯವರು ಸರಕಾರಕ್ಕೆ ಮಾಹಿತಿ ನೀಡುವ ಬದಲು ನೇರವಾಗಿ ಸಾರ್ವಜನಿಕರಿಗೆ ತಿಳಿಸಿದರು. ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಜನ ಸಾಗರೋಪಾದಿಯಲ್ಲಿ ಸೇರಲು ಆರಂಭಿಸಿದರು. ರಾಜ್‌ಕುಮಾರ್ ಆಸೆಯಂತೆ ನೇತ್ರದಾನಕ್ಕೆ ಅವಕಾಶ ಕೊಡದಂತೆ ಪಾರ್ಥಿವ ಶರೀರವನ್ನು ಸರಕಾರದ ಗಮನಕ್ಕೆ ತರದೆ ಸದಾಶಿವನಗರದ ಮನೆಗೆ ತೆಗೆದುಕೊಂಡು ಹೋದರು. ಅಲ್ಲಿ ಲಕ್ಷಾಂತರ ಜನ ಸೇರಿದ್ದರಿಂದ ಏನು ಮಾಡಲಾಗದಂತಹ ಸ್ಥಿತಿ ಇತ್ತು. ಅಭಿಮಾನಿಗಳು ಅಕ್ಷರಶಃ ದಾಳಿ ಮಾಡಿದರು. ಆಗ ಗೊಂದಲ ನಿರ್ಮಾಣ ವಾಗಿ, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಸಿಗದಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಅಂಬಿ ಪುತ್ರನ ಧೈರ್ಯ: ಅಂಬರೀಷ್ ಅವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ನಾನು ಭದ್ರತೆಯನ್ನೂ ಕಾಯದೆ ಖಾಸಗಿ ಕಾರಿನಲ್ಲಿ ಆಸ್ಪತ್ರೆಗೆ ತೆರಳಿದೆ. ಅಲ್ಲಿ ಅಂಬಿ ಅವರ ಪುತ್ರ ಅಭಿಷೇಕ್ ನಿಂತಿದ್ದ. ಆತನ ಕಣ್ಣಿನಲ್ಲಿದ್ದ ಧೈರ್ಯ ನೋಡಿ ನನಗೆ ಆಶ್ಚರ್ಯವಾಯಿತು. ಒಂದು ಹನಿ ಕಣ್ಣೀರು ಇಲ್ಲದೆ ಇಷ್ಟು ಧೈರ್ಯವಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದೆ.
ಒಂದು ವೇಳೆ ಕಣ್ಣೀರು ಹಾಕಿದರೆ ತಾಯಿ(ಸುಮಲತಾ) ಇನ್ನಷ್ಟು ಕುಗ್ಗಿ ಆಘಾತಕ್ಕೊಳಗಾಗಬಹುದು ಎಂದು ಅವಡುಗಚ್ಚಿ ನಿಂತಿದ್ದೇನೆ ಎಂದು ಅಭಿ ಹೇಳಿದ, ಅದು ಅವರ ತಂದೆಯಿಂದ ಬಂದ ಗುಣ ಎಂದು ಕುಮಾರಸ್ವಾಮಿ ನುಡಿದರು.
ಅಂಬರೀಷ್ ಅವರು ತಮ್ಮ ವೈಯಕ್ತಿಕ ಸ್ಥಾನಮಾನಗಳಿಗಾಗಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಹುಡುಗಾಟಿಕೆಯನ್ನು ಬಿಟ್ಟು ಗಂಭೀರವಾಗಿರುವಂತೆ ಹಲವಾರು ಬಾರಿ ಸಲಹೆ ನೀಡಿದರೂ ಅವರು ಅದನ್ನು ಪಾಲಿಸಲೇ ಇಲ್ಲ. ಅವರು ಅಂದುಕೊಂಡಂತೆ ಬದುಕಿದರು. ಅಂಬಿಯಲ್ಲಿ ಒರಟುತನ ಇತ್ತು. ಅದು ಮಂಡ್ಯದ ಮಣ್ಣಿನ ಗುಣ, ಅಷ್ಟೇ ಹೃದಯ ವೈಶಾಲ್ಯತೆಯೂ ಅವರಲ್ಲಿತ್ತು ಎಂದು ಹೇಳಿದರು.
ಅಂಬರೀಶ್ ಯಾರನ್ನೂ ದಾರಿ ತಪ್ಪಿಸಿದವರಲ್ಲ. ಚಿತ್ರ ನಿರ್ಮಾಣಕ್ಕಾಗಿ ಯಾರಾದರೂ ಅವರ ಬಳಿ ಹೋದರೆ ಇರುವ ದುಡ್ಡನ್ನು ಬೇರೆಯದಕ್ಕೆ ಬಳಸಿ ಉದ್ಧಾರ ಆಗು, ಚಿತ್ರರಂಗಕ್ಕೆ ಬಂದು ಕಳೆದುಕೊಳ್ಳಬೇಡ ಎಂದು ಸಲಹೆ ನೀಡುತ್ತಿದ್ದರು ಎಂದು ಕುಮಾರಸ್ವಾಮಿ ನೆನಪು ಮಾಡಿಕೊಂಡರು.
ವಿಷ್ಣು ಸ್ಮಾರಕ ಶೀಘ್ರ
ದೇವೇಗೌಡರು ಪ್ರಧಾನಿಯಾಗಿದ್ದಾಗ ನಾನು, ಅಂಬರೀಷ್, ವಿಷ್ಣುವರ್ಧನ್ ಒಂದೇ ವಿಮಾನದಲ್ಲಿ ದೆಹಲಿಗೆ ಹೋಗಿ ಪ್ರಧಾನಿ ಅವರ ಮನೆಯಲ್ಲಿ ಊಟ ಮಾಡಿದ್ದೆವು. ನನಗೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆಯೂ ಅಪಾರ ಗೌರವವಿದೆ. ವಿಷ್ಣು ಸ್ಮಾರಕದ ಬಗ್ಗೆ ಇರುವ ಗೊಂದಲಗಳನ್ನು ಶೀಘ್ರವೇ ಬಗೆಹರಿಸಲಾಗುವುದು.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ