ಕುತೂಹಲ ಮೂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಕೇರಳ ಭೇಟಿ

Update: 2018-11-30 13:06 GMT

ಬೆಂಗಳೂರು, ನ. 30: ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅನಾರೋಗ್ಯದ ನೆಪದಲ್ಲಿ ವಿಶ್ರಾಂತಿಗಾಗಿ ವೈದ್ಯರ ಸಲಹೆಯಂತೆ ಒಂದು ವಾರ ಕೇರಳ ಪ್ರವಾಸಕ್ಕೆ ಮುಂದಾಗಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಹಾಗೂ ಮೈತ್ರಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೇರಳದ ಕೋಟಕಲ್‌ನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಹಾಗೂ ಪ್ರಕೃತಿ ಚಿಕಿತ್ಸೆಯನ್ನು ಪಡೆಯಲು ಇಂದು ಕೇರಳಕ್ಕೆ ತೆರಳುತ್ತಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯ ರಾಜಕೀಯದಲ್ಲೇ ಬದಲಾವಣೆಗಳಾಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ವಿಪಕ್ಷ ನಾಯಕ ಯಡಿಯೂರಪ್ಪ ಕೇರಳಕ್ಕೆ ತೆರಳುತ್ತಿರುವುದು ರಾಜಕೀಯ ವ್ಯಾಖ್ಯಾನಕ್ಕೂ ಕಾರಣವಾಗಿದೆ. ಕೇರಳದಲ್ಲೇ ಕುಳಿತು ಬಿಎಸ್‌ವೈ ಏನೇನೆಲ್ಲ ಮಾಡಲಿದ್ದಾರೆಂಬುದು ಚರ್ಚೆಗೆ ಗ್ರಾಸವಾಗಿದೆ.

‘ಯಾವುದೇ ರಾಜಕೀಯ ಚಟುವಟಿಕೆಗಳಿಗಾಗಿ ಕೇರಳಕ್ಕೆ ತೆರಳುತ್ತಿಲ್ಲ. ವಿಶ್ರಾಂತಿಗಾಗಿ ಪ್ರಕೃತಿ ಚಿಕಿತ್ಸಾಧಾಮಕ್ಕೆ ದಾಖಲಾಗುತ್ತಿದ್ದಾರೆ’ ಎಂದು ಬಿಎಸ್‌ವೈ ಆಪ್ತರು ಸ್ಪಷ್ಟಣೆ ನೀಡಿದ್ದಾರೆ. ಆದರೆ, ಯಡಿಯೂರಪ್ಪ ಕೇರಳ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ. ಇಂದು ಕೇರಳಕ್ಕೆ ತೆರಳಲಿರುವ ಮಾಜಿ ಸಿಎಂ ಯಡಿಯೂರಪ್ಪನವರು ಪ್ರಕೃತಿ ಚಿಕಿತ್ಸೆ ಪಡೆದು ಡಿ.8ರಂದು ಬೆಂಗಳೂರು ನಗರಕ್ಕೆ ಹಿಂದಿರುಗಲಿದ್ದಾರೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News