ಸದಾಶಿವ ವರದಿ ಜಾರಿಗೆ ಆಗ್ರಹಿಸಿ ದಸಂಸ ಧರಣಿ

Update: 2018-11-30 14:08 GMT

ಬೆಂಗಳೂರು, ನ.30: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ ಪುರಭವನದ ಮುಂಭಾಗ ಜಮಾಯಿಸಿದ ದಸಂಸ ಸದಸ್ಯರು, ಸಾಮಾಜಿಕ ನ್ಯಾಯಕ್ಕಾಗಿ ಸದಾಶಿವ ಆಯೋಗದ ವರದಿ ರಚನೆಯಾಗಿದ್ದು, ಇದನ್ನು ಈ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

2004ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ನ್ಯಾ.ಎ.ಜೆ. ಸದಾಶಿವ ಆಯೋಗವನ್ನು ರಚನೆ ಮಾಡಿತ್ತು. ಸವಿಸ್ತಾರವಾಗಿ ಅಧ್ಯಯನ ನಡೆಸಿದ ಆಯೋಗವು 200 ಪುಟಗಳ ಸುದೀರ್ಘ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದೆ. ಹೀಗಾಗಿ, ಈ ವರದಿಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಎಂ.ಸೋಮಶೇಖರ್, ಸದಾಶಿವ ಆಯೋಗದ ವರದಿ ಜಾರಿಯ ಜೊತೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವ ಭಡ್ತಿ ಮೀಸಲಾತಿ ಸುಗ್ರೀವಾಜ್ಞೆಯನ್ನು ಈ ತಕ್ಷಣವೇ ಜಾರಿ ಮಾಡಿ ಎಸ್ಸಿ-ಎಸ್ಟಿ ನೌಕರರ ರಕ್ಷಣೆಗೆ ಮುಂದಾಗಬೇಕು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ದಸಂಸ ಸಂಚಾಲಕರಾದ ವಿ.ನಾರಾಯಣಸ್ವಾಮಿ, ಎಂ.ದೇವದಾಸ್, ಎಚ್.ಎನ್.ಸನಂದ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News