"ರೈತರಿಗೆ ನೋಟಿಸ್ ನೀಡುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪ್ರಧಾನಿ ಬುದ್ಧಿ ಹೇಳಲಿ"

Update: 2018-11-30 14:36 GMT

ಬೆಂಗಳೂರು, ನ.30: ರಾಷ್ಟ್ರರಾಜಧಾನಿ ಹೊಸದಿಲ್ಲಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ರಾಜ್ಯಗಳ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೆಂಬಲ ನೀಡಿದ್ದಾರೆ.

ಪ್ರಧಾನಿ ನರೇಂದ್ರಮೋದಿ ರೈತರ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಇದರಿಂದಾಗಿ, ದೇಶದ ರೈತರು ಹಲವಾರು ಸಮಸ್ಯೆಗಳು ಎದುರಿಸುವಂತಾಗಿದೆ ಎಂದು ಆರೋಪಿಸಿ, ಸರಣಿ ಟ್ವಿಟ್‌ಗಳನ್ನು ಮಾಡುವ ಮೂಲಕ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟ್ವಿಟ್-1: ‘ಸುಲಭ ಉದ್ಯಮ’ ಸೂಚ್ಯಂಕದಲ್ಲಿ ಭಾರತ ಉತ್ತಮ ಸ್ಥಾನಗಳಿಸಿ ಮೇಲಕ್ಕೆ ಬಂದಿದೆ ಎಂಬುದನ್ನು ಮೋದಿ ಸರಕಾರ ಮತ್ತು ಬಿಜೆಪಿ ಭಾರಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆದರೆ ಭಾರತ ‘ಸುಲಭ ಉದ್ಯಮ’ದ ಜೊತೆಗೆ ‘ಸುಲಭ ಕೃಷಿ’ಯಲ್ಲಿ ಸಾಧನೆ ಮಾಡಬೇಕು ಎಂಬುದು ಅತೀ ಮುಖ್ಯ ಸಂಗತಿ ನರೇಂದ್ರಮೋದಿಯವರೇ ಎಂದು ದೇವೇಗೌಡ ಟ್ವಿಟ್ ಮಾಡಿದ್ದಾರೆ.

ಟ್ವಿಟ್-2: ಭಾರತ ಮೂಲತಃ ಕೃಷಿ ಪ್ರಧಾನ ದೇಶ. ಆಹಾರ, ಉದ್ಯೋಗ, ಗ್ರಾಮೀಣಾಭಿವೃದ್ಧಿ ಸಾಧ್ಯವಾಗಬೇಕಾದರೆ ಸುಲಭ ಕೃಷಿ ಕಡೆಗೂ ಗಮನ ಹರಿಸಬೇಕು. ಸುಲಭ ಉದ್ಯಮ ಸ್ನೇಹಿ ವಾತಾವರಣ ಕಡೆಗಷ್ಟೇ ಗಮನಕೊಟ್ಟರೆ ಉದ್ಯಮಿಗಳಿಗಷ್ಟೇ ಅನುಕೂಲ ಆಗುತ್ತದೆ ಎಂದು ಟ್ವಿಟ್ ಮಾಡಿದ್ದಾರೆ.

ಟ್ವಿಟ್-3: ರೈತರ ಬೆಳೆ ಸಾಲ ಮನ್ನಾ ಮೂಲಕ ಕರ್ನಾಟಕ ಸುಲಭ ಕೃಷಿಯ ಕಡೆಗೆ ಸಾಗುತ್ತಿದೆ. ಪ್ರಧಾನಿ ನರೇಂದ್ರಮೋದಿಯವರಿಗೆ ಕರ್ನಾಟಕ ಮಾದರಿಯಾಗಲಿ. ಅದೇ ಹೊತ್ತಿನಲ್ಲಿ ಸಾಲ ಮರು ಪಾವತಿಗಾಗಿ ರೈತರಿಗೆ ನೋಟಿಸ್ ಕೊಡುತ್ತಿರುವ ದೇಶದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪ್ರಧಾನಿ ಬುದ್ಧಿ ಹೇಳಲಿ ಎಂದು ದೇವೇಗೌಡ ಟ್ವಿಟ್‌ನಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News