×
Ad

ಪೌರಕಾರ್ಮಿಕರಿಗೆ 550 ಕೋಟಿ ಪಾವತಿಸದೆ ವಂಚಿಸಿದ ಪ್ರಕರಣ: ಬಿಬಿಎಂಪಿ ಅಧಿಕಾರಿಗಳ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2018-11-30 21:50 IST

ಬೆಂಗಳೂರು, ನ.30: ಪೌರಕಾರ್ಮಿಕರಿಗೆ ಇಎಸ್‌ಐ ಹಾಗೂ ಪಿಎಫ್‌ಗೆ ಸಂಬಂಧಿಸಿದ ಸುಮಾರು 550 ಕೋಟಿ ರೂ. ಪಾವತಿಸದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ದಾಖಲೆ ಒದಗಿಸುವಂತೆ ಸೂಚಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಜಾರಿಗೊಳಿಸಿದ್ದ ನೋಟಿಸ್‌ಗಳ ರದ್ದತಿಗೆ ಕೋರಿ ಬಿಬಿಎಂಪಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಮಹದೇವಪುರ ವಲಯ ಜಂಟಿ ಆಯುಕ್ತೆ ಡಾ.ವಾಸಂತಿ ಅಮರ್ ಸೇರಿ 46 ಮಂದಿ ಬಿಬಿಎಂಪಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಕೋರಿರುವ ಮಾಹಿತಿ ಹಾಗೂ ದಾಖಲೆ ಒದಗಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಇದೇ ವೇಳೆ ಸೂಚಿಸಿದೆ.

ಪೌರಕಾರ್ಮಿಕರಿಗೆ ಇಎಸ್‌ಐ ಹಾಗೂ ಪಿಎಫ್ ಸೌಲಭ ಒದಗಿಸಲು ಹಿನ್ನೆಲೆಯಲ್ಲಿ ಅವರ ವಂತಿಕೆಯನ್ನು ವೇತನದಲ್ಲಿ ಕಡಿತಗೊಳಿಸಲಾಗುತ್ತಿತ್ತು. ಅದಕ್ಕೆ ಬಿಬಿಎಂಪಿ ತನ್ನ ಪಾಲು ಸೇರಿಸಿ ಸಂಗ್ರಹವಾದ ಸುಮಾರು 550 ಕೋಟಿ ರೂ.ವನ್ನು ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸಂಬಂಧಪಟ್ಟ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಲಪಟಾಯಿಸಿದ್ದಾರೆ. ಹೀಗಾಗಿ, ತನಿಖೆ ನಡೆಸುವಂತೆ ಕೋರಿ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಅವರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು.

ಅದರಂತೆ 2017ರಲ್ಲಿ ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ನಂತರ ತನಿಖೆಯನ್ನು ಎಸಿಬಿಗೆ ವಹಿಸಿತ್ತು. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿದ್ದ ಎಸಿಬಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರ ಕಾರ್ಮಿಕರ ಹಾಜರಾತಿ ಪುಸ್ತಕ ಹಾಗೂ ಗುತ್ತಿಗೆದಾರರ ಪಟ್ಟಿ ಒದಗಿಸುವಂತೆ ಬಿಬಿಎಂಪಿಯ ಎಲ್ಲ ವಲಯಗಳ ಜಂಟಿ ಆಯುಕ್ತರು ಹಾಗೂ ಎಂಜಿನಿಯರ್‌ಗಳಿಗೆ ನೋಟಿಸ್ ಜಾರಿ ಮಾಡಿತ್ತು. ಆ ನೋಟಿಸ್ ಹಾಗೂ ಎಸಿಬಿ ದಾಖಲಿಸಿದ್ದ ಎಫ್‌ಐಆರ್ ರದ್ದು ಕೋರಿ ಅಧಿಕಾರಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಎಸಿಬಿ ಪರ ವಕೀಲ ವೆಂಕಟೇಶ್ ದಳವಾಯಿ ವಾದಿಸಿ, ಇದೊಂದು ದೊಡ್ಡ ಹಗರಣವಾಗಿದೆ. ಸರಕಾರ ತನಿಖೆಯನ್ನು ಎಸಿಬಿಗೆ ವಹಿಸಿದೆ. ತನಿಖೆಯ ಹಿನ್ನೆಲೆಯಲ್ಲಿ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅರ್ಜಿದಾರರು ಸರಕಾರಿ ಅಧಿಕಾರಿಗಳಾಗಿದ್ದು, ತನಿಖಾ ಸಂಸ್ಥೆಗಳಿಗೆ ಸಹಕಾರ ನೀಡಬೇಕಿರುವುದು ಅವರ ಜವಾಬ್ದಾರಿ. ಅರ್ಜಿದಾರರು ತಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸಲಿ. ನಂತರ ಎಸಿಬಿ ಮುಂದಿನ ಕ್ರಮ ಜರುಗಿಸಲಿದ್ದು, ಅರ್ಜಿಗಳನ್ನು ಪುರಸ್ಕರಿಸಬಾರದು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News