ಆ್ಯಂಬಿಡೆಂಟ್ ಕಂಪೆನಿ ಡೀಲ್ ಪ್ರಕರಣ: ಅಲಿಖಾನ್ ಜಾಮೀನು ಅರ್ಜಿಗೆ ಸಿಸಿಬಿ ಪರ ವಕೀಲರಿಂದ ಆಕ್ಷೇಪಣೆ
ಬೆಂಗಳೂರು, ನ.30: ಆ್ಯಂಬಿಡೆಂಟ್ ಕಂಪೆನಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೆ ಆರೋಪಿ ಅಲಿಖಾನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾನೆ. ಸಿಸಿಬಿ ಪೊಲೀಸರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದು, ಅರ್ಜಿ ವಿಚಾರಣೆಯನ್ನು 1ನೆ ಎಸಿಎಂಎಂ ನ್ಯಾಯಾಲಯ ಶನಿವಾರಕ್ಕೆ ಮುಂದೂಡಿದೆ.
ಆಕ್ಷೇಪಣೆಯಲ್ಲಿ ಏನಿದೆ: ಆ್ಯಂಬಿಡೆಂಟ್ ಪ್ರಕರಣದಲ್ಲಿ ಅಲಿಖಾನ್‌ಗೆ ಬೇಲ್ ನೀಡಬಾರದು. ಆತನಿಂದ ಹಣ ವಾಪಸ್ ಬಂದಿಲ್ಲ. ಅಫಿಡೆವಿಟ್ ಸಲ್ಲಿಸಿ ತುಂಬಾ ದಿನ ಆದರೂ ಅಲಿಖಾನ್ 18 ಕೋಟಿ ವಾಪಸ್ ನೀಡಿಲ್ಲವೆಂದು ಉಲ್ಲೇಖ ಮಾಡಿದ್ದಾರೆ. ಅಲಿಖಾನ್‌ಗೆ ಒಂದು ವೇಳೆ ಜಾಮೀನು ನೀಡಿದರೆ ಅವನಿಂದ ಮತ್ತೆ ಹಣ ಪಡೆಯುವುದು ಕಷ್ಟ ಆಗುತ್ತದೆ. ಹೀಗಾಗಿ, ಆತನನ್ನು ಪುನಃ ಕಸ್ಟಡಿಗೆ ನೀಡಬೇಕೆಂದು ಸಿಸಿಬಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಪ್ರಕರಣವೇನು: ಆ್ಯಂಬಿಡೆಂಟ್ ಪ್ರಕರಣದಲ್ಲಿ ಅಲಿಖಾನ್ ಕೂಡ ಆರೋಪಿಯಾಗಿದ್ದು, ಮಾಜಿ ಸಚಿವ ಜನಾರ್ದನರೆಡ್ಡಿಗೆ ನ್ಯಾಯಾಲಯ ಜಾಮೀನು ನೀಡಿದ ದಿನವೇ ಅಲಿಖಾನ್ ಕೂಡ ನ್ಯಾಯಾಲಯಕ್ಕೆ ಅಫಿಡೆವಿಟ್ ಹಾಕಿದ್ದಾನೆ. ತಾನು ಆ್ಯಂಬಿಡೆಂಟ್ ಮಾಲಕ ಫರೀದ್ ಬಳಿ 18 ಕೋಟಿ ಸಾಲ ಪಡೆದಿದ್ದೆ. ಕೆಲ ದೇವಾಲಯಗಳಿಗೆ ದಾನ ಮಾಡಲು ಪಡೆದಿದ್ದೆ. ಅದು ಜನರಿಂದ ಸುಲಿಗೆ ಮಾಡಿದ ಹಣ ಎಂದು ತಿಳಿದಿರಲಿಲ್ಲ ಎಂದು ಅಫಿಡೆವಿಟ್ ಸಲ್ಲಿಸಿದ್ದ. ಅಲ್ಲದೆ, ಸದ್ಯದಲ್ಲೇ ಹಣ ಹಿಂದಿರುಗಿಸುವುದಾಗಿ ಹೇಳಿದ್ದ. ಆದರೆ, ಇಲ್ಲಿಯವರೆಗೆ ಹಣವನ್ನು ವಾಪಸ್ ನೀಡಿಲ್ಲ ಎಂದು ಸಿಸಿಬಿ ಪೊಲೀಸರು ಆಕ್ಷೇಣೆಯಲ್ಲಿ ಉಲ್ಲೇಖಿಸಿದ್ದಾರೆ.