ರಾಜ್ಯ ಸರಕಾರ ಶಿಕ್ಷಣಕ್ಕೆ ಮತ್ತಷ್ಟು ಒತ್ತು ನೀಡಬೇಕಿದೆ: ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ ಮೋಹನದಾಸ ಪೈ

Update: 2018-12-01 13:40 GMT

ಬೆಂಗಳೂರು, ಡಿ.1: ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ ಮೋಹನದಾಸ ಪೈ ಅಭಿಪ್ರಾಯಿಸಿದರು.

ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಯುವಿಸಿಇ ಹಳೆಯ ವಿದ್ಯಾರ್ಥಿಗಳ ಫೌಂಡೇಶನ್ ವತಿಯಿಂದ 200 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸಕ್ತ ದಿನಗಳಲ್ಲಿ ಶಿಕ್ಷಣದ ಸರಾಸರಿ ಪ್ರಮಾಣ ಕಡಿಮೆಯಾಗುತ್ತಿದೆ. ಅಂದರೆ, ತಮಿಳುನಾಡಿನಲ್ಲಿ ಶೇ. 47 ರಷ್ಟು ಇರುವ ಶಿಕ್ಷಣದ ಪ್ರಮಾಣ ರಾಜ್ಯದಲ್ಲಿ ಕೇವಲ ಶೇ. 30ರಷ್ಟಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು.

ದೇಶಕ್ಕೆ ವಿಶ್ವೇಶ್ಯರಯ್ಯ ಅವರು ನೀಡಿದ ಕೊಡುಗೆ ಅಪಾರ. ಅಂತಹ ಮಹಾನ್ ವ್ಯಕ್ತಿ ಸ್ಥಾಪಿಸಿದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುವುದು ಹೆಮ್ಮೆಯ ವಿಷಯವಾಗಿದೆ. ದೇಶಕ್ಕೆ ಶ್ರೇಷ್ಠ ಇಂಜಿನಿಯರುಗಳನ್ನು ನೀಡಿದ ಕೀರ್ತಿ ಈ ಕಾಲೇಜಿಗೆ ಸಲ್ಲುತ್ತದೆ. ಅದು ಮತ್ತಷ್ಟು ಉತ್ತುಂಗಕ್ಕೆ ಏರಬೇಕೆಂದು ಅವರು ಆಶಿಸಿದರು.

ಮುಂದಿನ 15 ವರ್ಷಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್, ರೋಬೋಟಿಕ್ಸ್, 3 ಡಿ ಪ್ರಿಂಟಿಂಗ್ ಸೇರಿದಂತೆ ಹಲವು ಕ್ಷೇತ್ರಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲಿವೆ. ಇಂತಹ ಕ್ಷೇತ್ರಗಳಲ್ಲಿ ನಮ್ಮ ವಿದ್ಯಾರ್ಥಿಗಳು ಹೆಚ್ಚಿನದನ್ನು ಕಲಿಯಲು ಸಾಧ್ಯವಾಗುವಂತಹ ಸೆಂಟರ್ ಫಾರ್ ಎಕ್ಸಲೆನ್ಸ್ ಯುವಿಸಿಇ ಆಗಬೇಕಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ವೇಣುಗೋಪಾಲ್ ಮಾತನಾಡಿ, ಯುವಿಸಿಇ ಕಾಲೇಜಿಗೆ ಡೀಮ್ಡ್ ಯೂನಿವರ್ಸಿಟಿಯ ಮಾನ್ಯತೆ ದೊರಕಿಸಲು ಸರಕಾರದ ಮಟ್ಟದಲ್ಲಿ ಈಗಾಗಲೇ ಮಾತುಕತೆ ಪ್ರಾರಂಭವಾಗಿದೆ. ಯುವಿಸಿಇ ಫೌಂಡೇಶನ್ ಅಡಿಯಲ್ಲಿ 1 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡುವ ಮೂಲಕ ಕಂಪ್ಯೂಟರ್ ಲ್ಯಾಬ್ ಅನ್ನು ಉನ್ನತೀಕರಿಸುತ್ತಿರುವುದು ಸಂತಸದ ವಿಷಯ ಎಂದರು. 

ಈ ವರ್ಷ ದಾಖಲೆ ಪ್ರಮಾಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವುದು ಸಂತಸ ತಂದಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿ ವೇತನವನ್ನು ದೇಶದ ಯಾವುದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘಗಳು ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಿನ ಹಸ್ತ ಚಾಚಿರುವ ಎಲ್ಲಾ ದಾನಿಗಳಿಗೆ ಮತ್ತು ಯುವಿಸಿಇಗೆ ನಾನು ಆಭಾರಿ.

-ಜಗದೀಶ್, ಯುವಿಸಿಇ ಫೌಂಡೇಷನ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News