ಬೆಂಗಳೂರು: ತಾಯಿ-ತಂಗಿಯ ಕೊಲೆಗೈದು, ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

Update: 2018-12-01 14:46 GMT

ಬೆಂಗಳೂರು, ಡಿ.1: ಇಬ್ಬರು ಮಹಿಳೆಯರಿಗೆ ವೈದ್ಯರೊಬ್ಬರು ಹೆಚ್ಚು ಪ್ರಮಾಣದ ಇನ್ಸುಲಿನ್ ನೀಡಿ ಕೊಲೆ ಮಾಡಿ, ತಾನೂ ಸಹ ಚುಚ್ಚುಮದ್ದಿನಿಂದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಲ್ಲಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರ್‌ಆರ್ ನಗರದ ಐಡಿಯಲ್ ಹೋಮ್ಸ್ ಮುನಿವೆಂಕಟಪ್ಪಪಾರ್ಕ್ ಸಮೀಪದ ನಿವಾಸಿಗಳಾದ ಮೂಕಾಂಬಿಕಾ(75), ಶ್ಯಾಮಲಾ(40) ಎಂಬವರು ಮೃತಪಟ್ಟಿದ್ದು, ಡಾ.ಗೋವಿಂದಪ್ರಕಾಶ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ ಎಂದು ತಿಳಿದುಬಂದಿದೆ.

ಕುಟುಂಬದವರ ಅನಾರೋಗ್ಯದಿಂದ ನೊಂದಿದ್ದ ವೈದ್ಯ ಗೋವಿಂದಪ್ರಕಾಶ್ ಅವರು ಆತ್ಮಹತ್ಯೆಗೆ ನಿರ್ಧರಿಸಿ ರಾತ್ರಿ ತನ್ನ ತಾಯಿ ಮತ್ತು ತಂಗಿಗೆ ಹೆಚ್ಚಿನ ಪ್ರಮಾಣದಲ್ಲಿ ಇನ್ಸುಲಿನ್ ನೀಡಿ, ತಾವೂ ಸಹ ಇನ್ಸುಲಿನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೇರೆ ಕೊಠಡಿಯಲ್ಲಿ ಮಲಗಿದ್ದ ವೈದ್ಯರ ತಂದೆ ಸುಬ್ಬರಾಯ ಭಟ್ ಅವರು ಶನಿವಾರ ಬೆಳಗ್ಗೆ ನೋಡಿದಾಗ ಮೂಕಾಂಬಿಕಾ ಮತ್ತು ಶ್ಯಾಮಲಾ ಸಾವನ್ನಪ್ಪಿರುವುದು ಹಾಗೂ ಗೋವಿಂದ ಪ್ರಕಾಶ್ ನರಳುತ್ತಿದುದ್ದು ಗಮನಿಸಿ ತಕ್ಷಣ ಸಹಾಯಕ್ಕಾಗಿ ನೆರೆಹೊರೆಯವರನ್ನು ಕರೆದಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ಗೋವಿಂದ ಪ್ರಕಾಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಘಟನಾ ಸ್ಥಳದಲ್ಲಿ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ಅನಾರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹಾಗೂ ತಮ್ಮ ಆಸ್ತಿಯು ತಂದೆ ಸುಬ್ಬರಾಯ ಭಟ್ ಅವರಿಗೆ ಸೇರಬೇಕೆಂದು ಬರೆಯಲಾಗಿದೆ ಎಂದು ತಿಳಿಸಲಾಗಿದೆ.

ಗೋವಿಂದಪ್ರಕಾಶ್ ವಿಜಯನಗರದಲ್ಲಿ ಶ್ಯಾಮಲಾ ಕ್ಲಿನಿಕ್ ನಡೆಸುತ್ತಿದ್ದರು. ಕೆಲ ತಿಂಗಳುಗಳಿಂದ ಕ್ಲಿನಿಕ್‌ಗೆ ಬಾಗಿಲು ಹಾಕಿ ಮನೆಯಲ್ಲಿಯೇ ರೋಗಿಗಳನ್ನು ನೋಡುತ್ತಿದ್ದರು. ಅಲ್ಲದೆ, ಬೇರೆ ಆಸ್ಪತ್ರೆಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಆರ್.ಆರ್.ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News