ಕನ್ನಡ ಸಾಹಿತಿಗಳು ಸಿನೆಮಾ ಸಾಹಿತ್ಯದತ್ತ ಆಸಕ್ತಿ ವಹಿಸಲಿ: ನಟ ಯಶ್

Update: 2018-12-01 16:32 GMT

ಬೆಂಗಳೂರು, ಡಿ.1: ಪ್ರಸ್ತುತ ಕನ್ನಡ ಚಿತ್ರರಂಗ ಸಿನೆಮಾ ಸಂಭಾಷಣೆ, ಚಿತ್ರಕತೆಯ ಕೊರತೆ ಎದುರಿಸುತ್ತಿದ್ದು, ಕನ್ನಡ ಸಾಹಿತಿಗಳು ಸಿನೆಮಾ ಸಾಹಿತ್ಯ ರಚನೆಯಲ್ಲೂ ಆಸಕ್ತಿ ವಹಿಸಬೇಕೆಂದು ಎಂದು ನಟ ಯಶ್ ಹೇಳಿದರು.

ಶನಿವಾರ ಅಂಕಿತ ಪುಸ್ತಕ ಪ್ರಕಾಶನ ನಗರದ ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಜೋಗಿ ಅವರ ‘ಸಲಾಂ ಬೆಂಗಳೂರು’ ಕಾದಂಬರಿ, ಲೇಖಕ ಶರತ್ ಭಟ್ ಸೇರಾಜಿ ಅವರ ‘ಬಾಗಿಲು ತೆರೆಯೇ ಸೇಸಮ್ಮ’ ವೈಚಾರಿಕ ಸುಲಲಿತ ಪ್ರಬಂಧ ಸಂಕಲನ ಮತ್ತು ಕಥೆಗಾರ ಸಚಿನ್ ತೀರ್ಥಹಳ್ಳಿ ಅವರ ‘ನವಿಲು ಕೊಂದ ಹುಡುಗ’ ಕಥಾ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇಂದು ಜಗತ್ತು ಹಲವು ರೀತಿಯಲ್ಲಿ ತೆರೆದುಕೊಳ್ಳುತ್ತಿದೆ. ನಾನಾ ರೀತಿಯ ಪುಸ್ತಕ, ವೆಬ್ ಸರಣಿ, ಸಿನಿಮಾ ಸೇರಿದಂತೆ ನಾನಾ ಬಗೆಯ ಮಾಧ್ಯಮಗಳು ಜನರಿಗೆ ತಲುಪುತ್ತಿವೆ. ಸಿನಿಮಾ ಹೆಚ್ಚು ಜನರಿಗೆ ತಲುಪುವ ಮಾಧ್ಯಮವಾಗಿದೆ. ಇಂದು ಕನ್ನಡ ಚಿತ್ರರಂಗ ಸಾಹಿತಿಗಳ ಕೊರತೆ ಅನುಭವಿಸುತ್ತಿದೆ. ಹೀಗಾಗಿ ಕನ್ನಡ ಸಾಹಿತಿಗಳು ಚಿತ್ರ ಸಾಹಿತ್ಯ ರಚನೆಗೂ ಮುಂದಾಗಬೇಕೆಂದು ಅವರು ಆಶಿಸಿದರು.

ತಮ್ಮ ಬದುಕಿನಲ್ಲಿ ಪುಸ್ತಕಗಳು ಗಂಭೀರ ಪರಿಣಾಮ ಬೀರಿವೆ. ಆರಂಭದ ದಿನಗಳಲ್ಲಿ ಧಾರಾವಾಹಿ, ನಾಟಕಗಳಲ್ಲಿ ಸಂಭಾಷಣೆ ಒಪ್ಪಿಸುವಾಗ ಹಳ್ಳಿಯ ಭಾಷೆ ಬರುತ್ತಿತ್ತು. ಹಾಗಾಗಿ ಕೆಲವರ ಸಲಹೆ ಮೇರೆಗೆ ಪುಸ್ತಕಗಳನ್ನು ಓದಲು ಆರಂಭಿಸಿ, ಕಾಲಕ್ರಮೇಣ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತೆ. ಧಾರಾವಾಹಿ ಚಿತ್ರೀಕರಣದ ವೇಳೆ ಒಂದು ಸಣ್ಣ ವಿರಾಮ ಸಿಕ್ಕರೂ ಪುಸ್ತಕ ಹಿಡಿದು ಕೂರುವ ಮಟ್ಟಕ್ಕೆ ಓದನ್ನು ಹಚ್ಚಿಕೊಂಡಿದ್ದೆ ಎಂದು ಅವರು ತಿಳಿಸಿದರು.

ಪುಸ್ತಕದ ಒಡನಾಟ ಇರಬೇಕು. ಏಕೆಂದರೆ, ಲೇಖಕರಾದವರು ನೂರಾರು ಜನರ ಬದುಕು, ಪುಸ್ತಕಗಳ ಓದು, ಸಂಶೋಧನೆ ಹೀಗೆ ಹಲವು ರೀತಿಯಲ್ಲಿ ಅಧ್ಯಯನ ಮಾಡಿ ಪುಸ್ತಕ ಬರೆಯುತ್ತಾರೆ. ನನ್ನ ಪ್ರಕಾರ ಇಂತಹ ಪುಸ್ತಕ ಓದುವುದರಿಂದ ಸುಲಭವಾಗಿ ಅಷ್ಟೂ ಜ್ಞಾನ ಪಡೆಯಬಹುದು ಎಂದು ಯಶ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಲೇಖಕರಾದ ಜೋಗಿ, ಲೇಖಕ ಶರತ್ ಭಟ್ ಸೇರಾಜಿ, ಸಚಿನ್ ತೀರ್ಥಹಳ್ಳಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News