ಅಲ್-ಹಸ್ಸಾ: ಐ.ಎಫ್.ಎಫ್.ನಿಂದ 'ನಮ್ಮ ಪ್ರವಾದಿ (ಸ)' ಸಂದೇಶ ಪ್ರಚಾರ ಕಾರ್ಯಕ್ರಮ

Update: 2018-12-02 05:36 GMT

ಸೌದಿ ಅರೇಬಿಯ, ಡಿ.2: ಇಂಡಿಯಾ ಫ್ರಟರ್ನಿಟಿ ಫೋರಂ(ಐ.ಎಫ್.ಎಫ್.), ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ಘಟಕದ ವತಿಯಿಂದ 'ನಮ್ಮ ಪ್ರವಾದಿ (ಸ)' ಸಾರ್ವಜನಿಕ ಪ್ರವಾದಿ ಸಂದೇಶ ಪ್ರಚಾರ ಕಾರ್ಯಕ್ರಮವು ಇತ್ತೀಚೆಗೆ ಸೌದಿ ಅರೇಬಿಯದ ಆಲ್ ಹಸ್ಸಾ ಮಝ್ಹರಿಯಾದ ಜೂರಿ ಸಭಾಂಗಣದಲ್ಲಿ ನಡೆಯಿತು. 

ಮುಖ್ಯ ಭಾಷಣ ಮಾಡಿದ ಇಂಡಿಯಾ ಫ್ರಟರ್ನಿಟಿ ಫೋರಂ, ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ಘಟಕದ ಸದಸ್ಯ ಇರ್ಷಾದ್ ಬಜ್ಪೆ, ''ನಮ್ಮ ಪ್ರವಾದಿ (ಸ.) ಇಡೀ ಮನುಕುಲವನ್ನು ಸಂಸ್ಕರಣೆ ನಡೆಸಿದರು. ಆದ್ದರಿಂದ ಅವರನ್ನು ಇಂದು ಇಡೀ ಜಗತ್ತು ಮನುಕುಲದ ವಿಮೋಚಕ ಎಂದು ಕೊಂಡಾಡುತ್ತಿದೆ"ಎಂದರು.

ಒಂದು ಅತ್ಯುತ್ತಮ ಸಮುದಾಯ ನಿರ್ಮಾಣಕ್ಕಾಗಿ ಪ್ರವಾದಿ ಮುಹಮ್ಮದ್ (ಸ.) ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಮಾತ್ರವಲ್ಲದೆ, ತನ್ನ ಜೊತೆಗಿರುವ ಸಂಗಾತಿಗಳನ್ನೂ ತರಬೇತುಗೊಳಿಸಿದರು. ಒಳಿತಿನ ಆದೇಶ ನೀಡುವುದರೊಂದಿಗೆ ಕೆಡುಕನ್ನು ತಡೆಯುವ ಕಾರ್ಯವನ್ನು ಪ್ರವಾದಿ ಮುಹಮ್ಮದ್ (ಸ.ಅ.)ನಿರ್ವಹಿಸಿದ್ದರು. ಅವರನ್ನು ಅನುಸರಿಸುವವರು ಕೂಡಾ ಇದೇ ರೀತಿಯ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಪವಿತ್ರ ಕುರ್ ಆನ್ ನಮಗೆ ಸೂಚ್ಯವಾಗಿ ತಿಳಿಸುತ್ತಿದೆ. ಪ್ರಸಕ್ತ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಮತ್ತು ನ್ಯಾಯದ ಪರವಾದ ಹೋರಾಟಗಳಲ್ಲಿ ಅದೇ ರೀತಿ ದೃಢವಾಗಿ ನಿಂತು ಕೆಡುಕುಗಳನ್ನು ತಡೆಯುತ್ತಾ ಒಳಿತನ್ನು ಪ್ರತಿಷ್ಠಾಪಿಸುತ್ತಾ ಹೋರಾಟ ರಂಗದಲ್ಲಿ ಮುಂದುವರಿದು, ಪ್ರವಾದಿವರ್ಯರ ಜೀವನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಾವು ಅವರ ನೈಜ ಅನುಯಾಯಿಗಳಾಗಲು ಸಾಧ್ಯ'' ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯಾ ಫ್ರಟರ್ನಿಟಿ ಫೋರಂ ಅಲ್ ಹಸ್ಸಾ ವಲಯ ಅಧ್ಯಕ್ಷ ಅಶ್ಫಾಕ್ ಸಾಣೂರು, ಸಂಘಟನೆಯು ವಿದೇಶದಲ್ಲಿ ನಡೆಸಿಕೊಂಡುಬರುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿ, ನಬಿ(ಸ)ಯವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೈಜ ಪ್ರವಾದಿ ಪ್ರೇಮಿಗಳಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಮಾಜಿಕ  ಶೌಕತ್ ಮಳಲಿ, ಇಂಡಿಯಾ ಫ್ರಟರ್ನಿಟಿ ಫೋರಂ ದಿಲ್ಲಿ ರಾಜ್ಯ ಅಲ್ ಹಸ್ಸಾ ವಲಯ ಅಧ್ಯಕ್ಷ ಅಬ್ದುಲ್ ಹಕೀಂ, ಇಂಡಿಯನ್ ಸೋಶಿಯಲ್ ಫೋರಂ ಅಲ್ ಹಸ್ಸಾ ವಲಯ ಅಧ್ಯಕ್ಷ ಅಬ್ದುಲ್ ಖಾದರ್ ಮರವೂರು, ಇಂಡಿಯಾ ಫ್ರಟರ್ನಿಟಿ ಫೋರಂ ತಮಿಳುನಾಡು ರಾಜ್ಯದ ಅಲ್ ಹಸ್ಸಾ ವಲಯ ಅಧ್ಯಕ್ಷ ಜಿನ್ನಾ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಮಕ್ಕಳ ಹಾಡು, ಭಾಷಣ, ಕ್ವಿಝ್ ಮತ್ತು ದಫ್ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಇಸಾಕ್ ಮಲ್ಲೂರು ಅವರ ಕಿರಾಅತ್ ಪಠಣದೊಂದಿಗೆ ಕಾರ್ಯಕರ್ಮ ಆರಂಭಗೊಂಡಿತು. ಮನ್ಸೂರ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು. ಇಂಡಿಯಾ ಫ್ರಟರ್ನಿಟಿ ಫೋರಂ ಅಲ್ ಹಸ್ಸಾ ವಲಯ ಕಾರ್ಯದರ್ಶಿ ನಝೀರ್ ನಾರ್ಲಪದವು ಸ್ವಾಗತಿಸಿದರು. ನಿಝಾಮ್ ಬೆಳಪು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News