ಮೊದಲ ಬಾರಿ ಇನಿಂಗ್ಸ್ ಜಯ ಸಾಧಿಸಿದ ಬಾಂಗ್ಲಾ

Update: 2018-12-02 18:31 GMT

ಢಾಕಾ, ಡಿ.2: ಆಫ್-ಸ್ಪಿನ್ನರ್ ಮೆಹಿದಿ ಹಸನ್ ಜೀವನಶ್ರೇಷ್ಠ ಬೌಲಿಂಗ್ ನೆರವಿನಿಂದ ಆತಿಥೇಯ ಬಾಂಗ್ಲಾದೇಶ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 184 ರನ್‌ಗಳಿಂದ ಜಯ ಸಾಧಿಸಿದೆ.

ಈ ಗೆಲುವಿನ ಮೂಲಕ ಬಾಂಗ್ಲಾದೇಶ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದೆ.

ಹಸನ್ ಮೂರನೇ ದಿನವಾದ ರವಿವಾರ ಕ್ರಮವಾಗಿ ಮೊದಲ ಹಾಗೂ ಎರಡನೇ ಇನಿಂಗ್ಸ್ ಗಳಲ್ಲಿ 58ಕ್ಕೆ 7 ಹಾಗೂ 59ಕ್ಕೆ 5 ವಿಕೆಟ್‌ಗಳನ್ನು ಕಬಳಿಸುವುದರೊಂದಿಗೆ ವಿಂಡೀಸ್ ತಂಡ 111 ಹಾಗೂ 213 ರನ್‌ಗಳಿಂದ ಆಲೌಟ್ ಆಗಲು ಕಾರಣರಾದರು. ಬಾಂಗ್ಲಾ ಇನ್ನೂ ಎರಡು ದಿನದ ಆಟ ಬಾಕಿ ಇರುವಾಗಲೇ ಭರ್ಜರಿ ಜಯ ದಾಖಲಿಸಿದೆ. ಚಿತ್ತಗಾಂಗ್‌ನಲ್ಲಿ ನಡೆದ ಮೊದಲ ಪಂದ್ಯವನ್ನು 64 ರನ್‌ಗಳಿಂದ ಗೆದ್ದುಕೊಂಡಿದ್ದ ಬಾಂಗ್ಲಾದೇಶ ನಾಲ್ಕು ವರ್ಷಗಳ ಬಳಿಕ ಮೊದಲ ಬಾರಿ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.

ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 508 ರನ್ ಗಳಿಸಿತ್ತು.

ಬಾಂಗ್ಲಾದ ಬೃಹತ್ ಮೊತ್ತ ನೋಡಿ ಕಂಗಾಲಾದ ವಿಂಡೀಸ್ ಮೊದಲ ಇನಿಂಗ್ಸ್ ನಲ್ಲಿ ಕೇವಲ 111 ರನ್ ಗಳಿಸಿ ಆಲೌಟಾಯಿತು. ಮಾತ್ರವಲ್ಲ ಟೆಸ್ಟ್ ಪಂದ್ಯದಲ್ಲಿ ಇದೇ ಮೊದಲ ಬಾರಿ ಬಾಂಗ್ಲಾದೇಶದಿಂದ ಫಾಲೋ-ಆನ್‌ಗೆಸಿಲುಕಿದ ತಂಡ ಎಂಬ ಅಪಕೀರ್ತಿಗೆ ಒಳಗಾಯಿತು.

  ವಿಂಡೀಸ್ 2ನೇ ಇನಿಂಗ್ಸ್‌ನಲ್ಲಿ 213 ರನ್‌ಗೆ ಆಲೌಟಾಯಿತು. ಬಿಗ್ ಹಿಟ್ಟರ್ ಶಿಮ್ರ್‌ನ್ ಹೆಟ್ಮೆಯರ್ 92 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 93 ರನ್ ಗಳಿಸಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಕೆರಿಬಿಯನ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಮತ್ತೊಮ್ಮೆ ಕುಸಿತ ಕಾಣದಂತೆ ನೋಡಿಕೊಂಡರು.

ಆದರೆ, ಮೆಹಿದಿ ಅವರು ಹೆಟ್ಮೆಯರ್ ಚೊಚ್ಚಲ ಶತಕ ದಾಖಲಿಸಲು ತಡೆಯಾದರು. ಹೆಟ್ಮೆಯರ್ ತನ್ನ ಅಬ್ಬರದ ಇನಿಂಗ್ಸ್‌ನಲ್ಲಿ 10ನೇ ಸಿಕ್ಸರ್ ಬಾರಿಸುವ ಯತ್ನಕ್ಕೆ ಕೈಹಾಕಿ ಲಾಂಗ್‌ಆನ್‌ನಲ್ಲಿ ಮುಹಮ್ಮದ್ ಮಿಥುನ್‌ಗೆ ಕ್ಯಾಚ್ ನೀಡಿದರು.

ಜೊಮೆಲ್ ವಾರಿಕನ್(0) ವಿಕೆಟ್ ಪಡೆದ ಹಸನ್ ಪಂದ್ಯದಲ್ಲಿ ಸತತ ಎರಡನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಪಂದ್ಯದಲ್ಲಿ 117 ರನ್ ವೆಚ್ಚಕ್ಕೆ 12 ವಿಕೆಟ್‌ಗಳನ್ನು ಕಬಳಿಸಿದ ಹಸನ್ ಬಾಂಗ್ಲಾದೇಶದ ಪರ ಶ್ರೇಷ್ಠ ಪ್ರದರ್ಶನ ಮಾಡಿದ ಟೆಸ್ಟ್ ಬೌಲರ್ ಎನಿಸಿಕೊಂಡರು.

21ರ ಹರೆಯದ ಸ್ಪಿನ್ ಬೌಲರ್ ಹಸನ್ ಇದೇ ಮೈದಾನದಲ್ಲಿ 2016ರಲ್ಲಿ ನಿರ್ಮಿಸಿದ್ದ ತನ್ನದೇ ಬೌಲಿಂಗ್ ದಾಖಲೆಯನ್ನು (12-159)ಉತ್ತಮಪಡಿಸಿಕೊಂಡರು.

ಕೆಮರ್ ರೋಚ್ 49 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ ಔಟಾಗದೆ 37 ರನ್ ಗಳಿಸಿದರು. ಆದರೆ, ರೋಚ್ ಅವರ ಹೋರಾಟ ತಂಡವನ್ನು ಹೀನಾಯ ಸೋಲಿನಿಂದ ಬಚಾವ್ ಆಗಿಸಲು ಸಾಧ್ಯವಾಗಿಸಲಿಲ್ಲ.

20 ರನ್ ಗಳಿಸಿದ್ದ ಶೆರ್ಮೊನ್ ಲೂವಿಸ್ ವಿಕೆಟ್ ಉರುಳಿಸಿದ ತೈಜುಲ್ ಇಸ್ಲಾಮ್(3-40)ವಿಂಡೀಸ್ ಇನಿಂಗ್ಸ್‌ಗೆ ತೆರೆ ಎಳೆದರು.

 ವಿಂಡೀಸ್ ರವಿವಾರ 5 ವಿಕೆಟ್ ನಷ್ಟಕ್ಕೆ 75 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಒಂದು ಗಂಟೆಯೊಳಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡ ವಿಂಡೀಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಹೆಟ್ಮೆಯರ್ ಮೊದಲ ಇನಿಂಗ್ಸ್‌ನಲ್ಲಿ ಕೂಡ ಅಗ್ರ ಸ್ಕೋರರ್(39)ಎನಿಸಿಕೊಂಡರು. ಆಫ್-ಸ್ಪಿನ್ನರ್ ಮೆಹಿದಿ ರಿಟರ್ನ್ ಕ್ಯಾಚ್ ಪಡೆದು ಹೆಟ್ಮೆಯರ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಹೆಟ್ಮೆಯರ್ ನಿರ್ಗಮನದ ಬಳಿಕ ವಿಂಡೀಸ್ ಕುಸಿತದ ಹಾದಿ ಹಿಡಿಯಿತು.

 ಮೆಹಿದಿ ಕ್ಷಿಪ್ರವಾಗಿ ಮೂರು ವಿಕೆಟ್‌ಗಳನ್ನು ಪಡೆದರು. ಶಾಕಿಬ್ ಅಲ್ ಹಸನ್(3-27)ವಿಂಡೀಸ್‌ನ್ನು ಮೊದಲ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News