ಹವಾಮಾನ ಬದಲಾವಣೆ ವಿರುದ್ಧದ ಸಮರಕ್ಕೆ ವಿಶ್ವಬ್ಯಾಂಕ್ ನೆರವು ದುಪ್ಪಟ್ಟು

Update: 2018-12-03 03:26 GMT

ಕಟೊವೈಸ್, ಡಿ.3: ವಿಶ್ವಕ್ಕೇ ಮಾರಕವಾದ ಹವಾಮಾನ ಬದಲಾವಣೆ ವಿರುದ್ಧದ ಸಮರಕ್ಕೆ ವಿಶ್ವಬ್ಯಾಂಕ್ ನೀಡುವ ನೆರವನ್ನು ದುಪ್ಪಟ್ಟುಗೊಳಿಸಲಾಗಿದೆ. 2021-25ರ ಅವಧಿಯ ಹವಾಮಾನ ಹೂಡಿಕೆ ಕ್ರಿಯಾ ಯೋಜನೆಗೆ ವಿಶ್ವಬ್ಯಾಂಕ್ ಸೋಮವಾರ 200 ಶತಕೋಟಿ ಡಾಲರ್ ನೆರವು ಘೋಷಿಸಿದೆ.

ಪೋಲಂಡ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಹವಾಮಾನ ಶೃಂಗ ಸಂದರ್ಭದಲ್ಲೇ ಈ ದೊಡ್ಡ ಮೊತ್ತದ ನೆರವನ್ನು ವಿಶ್ವಬ್ಯಾಂಕ್ ಘೋಷಿಸಿದೆ. 200 ದೇಶಗಳು ಈ ಸಮಾವೇಶದಲ್ಲಿ ಭಾಗವಹಿಸಿವೆ. ಇದು ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಉತ್ತೇಜನ ನೀಡುವುದು ಮಾತ್ರವಲ್ಲದೇ, ಇದನ್ನು ಆದ್ಯತೆಯ ಮೇಲೆ ಇಡೀ ವಿಶ್ವವೇ ಕೈಗೆತ್ತಿಕೊಳ್ಳಬೇಕು ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ.

ಅಭಿವೃದ್ಧಿ ಹೊಂದಿದ ದೇಶಗಳು ಈ ಕ್ಷೇತ್ರದಲ್ಲಿ ಮಾಡುವ ಒಟ್ಟು ಸರ್ಕಾರಿ ಹಾಗೂ ಖಾಸಗಿ ವೆಚ್ಚವನ್ನು 2020ರ ಒಳಗಾಗಿ 100 ಶತಕೋಟಿ ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಿದ್ದು, ಇದು 2016ರಲ್ಲಿ 48.5 ಶತಕೋಟಿ ಹಾಗೂ ಕಳೆದ ವರ್ಷ 56.7 ಶತಕೋಟಿ ಡಾಲರ್ ಆಗಿತ್ತು ಎಂದು ಇತ್ತೀಚಿನ ಓಇಸಿಡಿ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.

ದಕ್ಷಿಣ ಧ್ರುವದ ದೇಶಗಳು ಹವಾಮಾನ ಬದಲಾವಣೆ ಪರಿಣಾಮ ಎದುರಿಸುವ ನಿಟ್ಟಿನಲ್ಲಿ ಆರಂಭಿಸಿರುವ ಸಮರ ಇದೀಗ ಉತ್ತರ ಧ್ರುವದ ದೇಶಗಳನ್ನೂ ಹೀಗೆ ಮಾಡುವಂತೆ ಪ್ರೇರೇಪಿಸಿದೆ. ವಿಶ್ವಬ್ಯಾಂಕ್ ನೀಡುವ 200 ಶತಕೋಟಿ ಡಾಲರ್ ನೆರವಿನ ಪೈಕಿ 100 ಶತಕೋಟಿ ಡಾಲರ್ ನೇರ ಹಣಕಾಸು ನೆರವಾಗಿರುತ್ತದೆ ಎಂದು ಪ್ರಕಟನೆ ಸ್ಪಷ್ಟಪಡಿಸಿದೆ.

ಉಳಿಕೆ ಹಣದ ಮೂರನೇ ಒಂದು ಭಾಗವನ್ನು ವಿಶ್ವಬ್ಯಾಂಕ್‌ನ ಎರಡು ಏಜೆನ್ಸಿಗಳು ಭರಿಸಲಿದ್ದು, ಉಳಿದ ಭಾಗವನ್ನು ಖಾಸಗಿ ಹೂಡಿಕೆ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ಪ್ರಕಟನೆ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News