×
Ad

ರೈತರ ಸಾಲಮನ್ನಾಕ್ಕೆ ಕೇಂದ್ರದ ನೆರವಿಗಾಗಿ ಕಾಯುವುದಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-12-04 18:37 IST

ಬೆಂಗಳೂರು, ಡಿ. 4: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲಮನ್ನಾಕ್ಕೆ ನಾವು ಕೇಂದ್ರ ಸರಕಾರದ ಮೇಲೆ ಅವಲಂಬಿಸಿಲ್ಲ. ರೈತರ ಸಾಲಮನ್ನಾಕ್ಕೆ ಯಾವುದೇ ಹಣಕಾಸಿನ ಕೊರತೆಯೂ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಾಲಮನ್ನಾಕ್ಕೆ ಬಜೆಟ್‌ನಲ್ಲೆ 6,500 ಕೋಟಿ ರೂ.ಮೀಸಲಿಟ್ಟಿದ್ದೇವೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 17ಲಕ್ಷ ರೈತರ 50 ಸಾವಿರ ರೂ.ವರೆಗಿನ ಸಾಲಮನ್ನಾ ಆಗಲಿದೆ ಎಂದು ಹೇಳಿದರು.

ಡಿ.8ಕ್ಕೆ ಚಾಲನೆ: ರೈತರ ಸಾಲಮನ್ನಾಕ್ಕೆ ಡಿ.8ಕ್ಕೆ ಕಲಬುರ್ಗಿ ಜಿಲ್ಲೆ ಸೇಡಂ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ರೈತರಿಗೆ ಋಣಮುಕ್ತ ಪತ್ರ ವಿತರಣೆಗೆ ಚಾಲನೆ ನೀಡಲಾಗುವುದು ಎಂದ ಅವರು, ಸಹಕಾರಿ ಬ್ಯಾಂಕುಗಳಿಗೆ ನ.30ರ ವರೆಗಿನ 1,300 ಕೋಟಿ ರೂ. ಹಣ ಬಿಡುಗಡೆಯಾಗಿದೆ.

ಡಿಸೆಂಬರ್‌ಗೆ 350 ಕೋಟಿ ರೂ. ಬಿಡುಗಡೆ ಮಾಡಲು ಸಿದ್ಧವಿದ್ದು, ಸರಕಾರಕ್ಕೆ 2.20ಲಕ್ಷ ರೈತರು ಮಾಹಿತಿ ನೀಡಿದ್ದು, ಅವರಿಗೆ ನಾವು ಭರವಸೆ ನೀಡಿದಂತೆ ಸಾಲಮನ್ನಾ ಮಾಡಲಿದ್ದೇವೆ ಎಂದ ಅವರು, ರೈತರ ಸಾಲಮನ್ನಾಕ್ಕೆ ನಾವು ಕೇಂದ್ರದ ನೆರವಿಗಾಗಿ ಕಾಯುತ್ತಿಲ್ಲ ಎಂದರು.

ಪ್ರಧಾನಿ ಮೋದಿಯವರನ್ನು ಖುದ್ದು ಭೇಟಿ ಮಾಡಿದ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾಕ್ಕೆ ಕೇಂದ್ರ ಸರಕಾರ ಶೇ.50ರಷ್ಟು ನೆರವು ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ, ಅವರಿಗೆ ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಹೇಳಿದರು.

ಬೆಳಗಾವಿಯ ಚಳಿಗಾಲದ ಅಧಿವೇಶದ ಬಳಿಕ ರೈತರಿಗೆ ಸಾಲಮನ್ನಾ ಸಂಬಂಧ 10ಲಕ್ಷ ಮಂದಿ ರೈತರನ್ನು ಸೇರಿಸಿ ಎಲ್ಲರಿಗೂ ‘ಋಣಮುಕ್ತ ಪತ್ರ’ ವಿತರಣೆ ಮಾಡಲಾಗುವುದು ಎಂದ ಅವರು, ರೈತರ ಸಾಲಮನ್ನಾಕ್ಕೆ ಆರ್ಥಿಕ ಕೊರತೆ ಇಲ್ಲ ಎಂದು ಹೇಳಿದರು.

‘ರಾಷ್ಟ್ರೀಕೃತ ಬ್ಯಾಂಕುಗಳ ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತವೆ. ಸಾಲಮನ್ನಾಕ್ಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ, ಪ್ರಧಾನಿ ಮೋದಿ ಬಳಿ ಹೋಗಿ ಕೇಳಬೇಕು. ಅದು ಬಿಟ್ಟು ನಮ್ಮನ್ನು ಕೇಳುವ ಪ್ರಮೇಯವೇ ಇಲ್ಲ. ಈ ಎಲ್ಲ ವಿಚಾರಗಳನ್ನು ಅಧಿವೇಶನದಲ್ಲಿ ಚರ್ಚಿಸಲು ಸಿದ್ಧ’

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News