ಬೆಂಗಳೂರು: ರೈಲಿನಿಂದ ಬಿದ್ದು ಮಾಜಿ ಶಾಸಕ ಸಂಭಾಜಿ ಪಾಟೀಲ್ ಪುತ್ರ ಮೃತ್ಯು

Update: 2018-12-04 13:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.4: ಚಲಿಸುವ ರೈಲಿನಿಂದ ಕೆಳಗೆ ಬಿದ್ದು ಬೆಳಗಾವಿಯ ಮಾಜಿ ಶಾಸಕ ಸಂಭಾಜಿ ಪಾಟೀಲ್ ಅವರ ಪುತ್ರ ಸಾಗರ್ ಮೃತಪಟ್ಟಿರುವ ಘಟನೆ ನಗರದ ಮಲ್ಲೇಶ್ವರಂ ರೈಲು ನಿಲ್ದಾಣದ ಬಳಿ ನಡೆದಿದೆ.

ಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಸಾಗರ್(28) ಸೋಮವಾರ ರಾತ್ರಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಆದರೆ, ರೈಲು ಮಲ್ಲೇಶ್ವರಂ ನಿಲ್ದಾಣದ ಬಳಿಯ ಶ್ರೀರಾಂಪುರ ಸಮೀಪ ಬರುವಾಗ ಬಾಗಿಲ ಬಳಿ ಬಂದಿದ್ದ ಸಾಗರ್, ದಿಢೀರ್ ಕೆಳಗೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಇದನ್ನು ಗಮನಿಸಿದ ಕೆಲ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದಾಗ ಸಾಗರ್ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಸಿಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News