×
Ad

ಶೈಕ್ಷಣಿಕ ಸಾಲ, ಬಡ್ಡಿ ಮನ್ನಾಗೆ ಆಗ್ರಹಿಸಿ ಡಿ.13ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಸತ್ಯಾಗ್ರಹ

Update: 2018-12-04 19:46 IST

ಬೆಂಗಳೂರು, ಡಿ.4: ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲ ಮನ್ನಾಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಪೋಷಕರೊಂದಿಗೆ ಡಿ.13ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಸತ್ಯಾಗ್ರಹ ಮಾಡುವುದಾಗಿ ಈಶಾನ್ಯ ವಲಯದ ಶಿಕ್ಷಕರ ವೇದಿಕೆಯ ಅಧ್ಯಕ್ಷ ಪ್ರೊ.ಎಂ.ಬಿ.ಅಂಬಲಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲಕ್ಕೆ ಬಡ್ಡಿಯನ್ನು ತುಂಬುವುದಾಗಿ 2009 ಹಾಗೂ 2014ರಲ್ಲಿ ಯುಪಿಎ ಸರಕಾರ ಆದೇಶ ಹೊರಡಿಸಿದ್ದು, ಶೈಕ್ಷಣಿಕ ಸಾಲದ ಬಡ್ಡಿ ಬಿಡುಗಡೆ ಮಾಡಿರುವುದಾಗಿ ಹಿಂದಿನ ಮಾನವ ಸಂಪನ್ಮೂಲ ಸಚಿವರಾದ ಸ್ಮತಿ ಇರಾನಿ ಲಿಖಿತವಾಗಿ ತಿಳಿಸಿದ್ದಾರೆ. ಆದರೆ, ಸಾಲ ಪಡೆದವರ ಖಾತೆಗೆ ಹಣ ಬಾರದಿರುವುದರಿಂದ ಬ್ಯಾಂಕ್‌ನವರು ಶೇ.13ರಿಂದ ಶೇ.16ರಷ್ಟು ದುಬಾರಿ ಬಡ್ಡಿ ಹಾಕಿ ವಸೂಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಾಲ ಪಡೆದವರೆಲ್ಲರೂ ವ್ಯಾಸಂಗ ಮುಗಿಸಿ ಯಾವುದೇ ಉದ್ಯೋಗವಿಲ್ಲದೆ ಅಲೆದಾಡುತ್ತಿದ್ದು, ಸಾಲ ಪಡೆದವರ ಸಂಪೂರ್ಣ ಶೈಕ್ಷಣಿಕ ಸಾಲ ಮನ್ನಾ ಮಾಡಿ, ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಅಥವಾ ಸ್ವ-ಉದ್ಯೋಗಕ್ಕಾಗಿ ಬಡ್ಡಿ ರಹಿತ ಸಾಲ ನೀಡಬೇಕೆಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅನೇಕ ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ನಡೆಯುವ ಸತ್ಯಾಗ್ರಹದಲ್ಲಿ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳ ಪೋಷಕರು ಸಾಲದ ಮಾಹಿತಿಯೊಂದಿಗೆ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 98801 69907 ಅನ್ನು ಸಂಪರ್ಕಿಸಲು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News