ನಟ ಅಂಬರೀಷ್ 11ನೆ ದಿನದ ಪುಣ್ಯ ತಿಥಿ: ಅಭಿಮಾನಿಗಳು, ಕುಟುಂಬ ಸದಸ್ಯರಿಂದ ಭಾವಪೂರ್ಣ ನಮನ
ಬೆಂಗಳೂರು, ಡಿ.4: ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಷ್‌ರವರ 11ನೆ ದಿನದ ಪುಣ್ಯತಿಥಿಯ ಪ್ರಯುಕ್ತ ಕುಟುಂಬದ ಸದಸ್ಯರು ಹಾಗೂ ಚಿತ್ರ ಕಲಾವಿದರು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದರು.
ಅಂಬರೀಷ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಹಾಗೂ ಚಿತ್ರಕಲಾವಿದರ ದರ್ಶನ್, ರಾಕ್‌ಲೈನ್ ವೆಂಕಟೇಶ್, ಶಾಸಕ ಗೋಪಾಲಯ್ಯ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ಅಂಬರೀಷ್ ಸಮಾಧಿಗೆ ಪೂಜೆ ಸಲ್ಲಿಸಿ ಭಾವುಕರಾದರು.
ಜನಸ್ತೋಮ: ರಾಜ್ಯ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಅಂಬರೀಷ್ ಸಮಾಧಿ ಬಳಿಗೆ ಬಂದು ಜಯಕಾರ ಹಾಕಿದರು. ದೊಡ್ಡ ಗಾತ್ರದ ಹೂಮಾಲೆಗಳನ್ನು ತಮ್ಮ ನೆಚ್ಚಿನ ನಟನ ಸಮಾಧಿಗೆ ಹಾಕಿ, ಕಣ್ಣೀರು ಹಾಕಿದರು. ಅಂಬರೀಷ್ ಅಣ್ಣಾ ಮತ್ತೆ ಹುಟ್ಟಿ ಬನ್ನಿ ಎಂದು ಘೋಷಣೆ ಕೂಗಿದರು.
ನನ್ನ ನೆಚ್ಚಿನ ನಟ ಅಂಬರೀಷ್ ಅವರನ್ನು ತೀರ ಹತ್ತಿರದಿಂದ ನೋಡಲು ಸಾಧ್ಯವಾಗಲೆ ಇಲ್ಲ. ಕೊನೆಗೆ ಅವರ ಸಮಾಧಿಯನ್ನಾದರೂ ಸ್ಪರ್ಶಿಸೋಣವೆಂಬ ಮಹಾದಾಸೆಯಿಂದ ಬಳ್ಳಾರಿಯಿಂದ ಬಂದಿದ್ದೇನೆ. ಅವರು ತಮ್ಮ ಪಾಲಿಗೆ ಸ್ಫೂರ್ತಿಯಾಗಿದ್ದರು. ಅವರ ಸಿನೆಮಾಗಳನ್ನು ನೋಡಿ, ಜೀವನವನ್ನು ರೂಪಿಸಿಕೊಂಡಿದ್ದೇನೆಂದು ರಮೇಶ್ ಭಾವುಕರಾಗಿ ನುಡಿದರು.
ಅನ್ನ ಸಂತರ್ಪಣೆ: ಇದೇ ವೇಳೆ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಅಭಿಮಾನಿಗಳೆ ಸ್ವಯಂ ಪ್ರೇರಣೆಯಿಂದ ಅನ್ನ ಸಂತರ್ಪಣೆ ಜತೆಗೂಡಿ, ಸಾರ್ವಜನಿಕರಿಗೆ ಅನ್ನದಾನ ಮಾಡಿದ್ದು ವಿಶೇಷವಾಗಿತ್ತು.