ದಯವಿಟ್ಟು ತೆಗೆದುಕೊಳ್ಳಿ: ಸಾಲದ ಹಣ ಶೇ. 100ರಷ್ಟು ವಾಪಸ್ ನೀಡುವುದಾಗಿ ಮಲ್ಯ ಟ್ವೀಟ್

Update: 2018-12-05 07:08 GMT

ಹೊಸದಿಲ್ಲಿ, ಡಿ.5: ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಬಾಕಿಯಿರಿಸಿ ದೇಶ ಬಿಟ್ಟು ಪಲಾಯನಗೈದಿರುವ ಉದ್ಯಮಿ ವಿಜಯ್ ಮಲ್ಯ ಬುಧವಾರ ಟ್ವೀಟ್ ಮಾಡಿ ಈಗ ಮುಚ್ಚಿರುವ ಅವರ ಕಿಂಗ್ ಫಿಶರ್ ಏರ್‍ಲೈನ್ಸ್ ಸಂಸ್ಥೆಯನ್ನು ಅಸ್ತಿತ್ವದಲ್ಲಿರುವಂತೆ ಮಾಡಲು ತಾನು ಪಡೆದ ಸಾಲದ ಎಲ್ಲಾ ಹಣವನ್ನು ವಾಪಸ್ ಪಡೆಯುವಂತೆ ವಿವಿಧ ಬ್ಯಾಂಕುಗಳಿಗೆ ``ವಿನೀತರಾಗಿ ಮನವಿ'' ಮಾಡಿದ್ದಾರೆ. ತಮ್ಮನ್ನು ಸುಸ್ತಿದಾರ ಎಂದು ಸತತ ಬಣ್ಣಿಸುತ್ತಿರುವ ಭಾರತೀಯ ಮಾಧ್ಯಮವನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

``ನನ್ನ ಗಡೀಪಾರು ಕುರಿತಾದ ನಿರ್ಧಾರದ ಬಗ್ಗೆ ಮಾಧ್ಯಮದ ವಿವರಣೆ ನೋಡಿದೆ. ಇದು ಬೇರೆಯೇ ವಿಚಾರ ಹಾಗೂ  ಕಾನೂನಿನಂತೆ ಮುಂದುವರಿಯಲಿದೆ. ಇಲ್ಲಿ ಬಹು ಮುಖ್ಯ ವಿಚಾರವೆಂದರೆ ಸಾರ್ವಜನಿಕ ಹಣ, ನಾನು ಶೇ 100ರಷ್ಟು ಹಣ ವಾಪಸ್ ನೀಡಲು ಆಫರ್ ಮಾಡುತ್ತಿದ್ದೇನೆ. ಈ ಹಣವನ್ನು ಪಡೆದುಕೊಳ್ಳುವಂತೆ ಬ್ಯಾಂಕುಗಳು ಹಾಗೂ ಸರಕಾರಕ್ಕೆ ವಿನೀತನಾಗಿ ಮನವಿ ಮಾಡುತ್ತೇನೆ'' ಎಂದು ಮಲ್ಯ ಸರಣಿ ಟ್ವೀಟ್ ಮಾಡಿದ್ದಾರೆ.

``ರಾಜಕಾರಣಿಗಳು ಹಾಗೂ ಮಾಧ್ಯಮ ನಾನು ಸಾರ್ವಜನಿಕ ರಂಗದ ಬ್ಯಾಂಕಿನ ಹಣದೊಂದಿಗೆ ಓಡಿ ಹೋದ ಸುಸ್ತಿದಾರ ಎಂದು  ನನ್ನ ಬಗ್ಗೆ ದೊಡ್ಡದಾಗಿ ಸತತ ಹೇಳುತ್ತಿದ್ದಾರೆ. ಇದೆಲ್ಲಾ ಸುಳ್ಳು.  ನಾನು ಕರ್ನಾಟಕ ಹೈಕೋರ್ಟ್ ಮುಂದೆ ವಿಸ್ತ್ರತ ಸೆಟ್ಲ್‍ಮೆಂಟ್ ಬಗ್ಗೆ ತಿಳಿಸಿರುವ ವಿಚಾರವನ್ನೂ ಅಷ್ಟೇ ದೊಡ್ದದಾಗಿ ಏಕೆ ಹೇಳಲಾಗುತ್ತಿಲ್ಲ?'' ಎಂದು ಅವರು ಪ್ರಶ್ನಿಸಿದ್ದಾರೆ.

ಮಲ್ಯ ಗಡೀಪಾರು ವಿಚಾರ ಕುರಿತಂತೆ ಲಂಡನ್ ನಗರದ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ತಿಂಗಳು ತೀರ್ಪು ನೀಡುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News