ಜಮ್ಮು ಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರ ಕ್ರಮ ಅಸಾಂವಿಧಾನಿಕ: ಬಿಜೆಪಿ ಶಾಸಕ

Update: 2018-12-05 08:56 GMT

ಜಮ್ಮು, ಡಿ.5: ``ಜಮ್ಮು ಕಾಶ್ಮೀರದ ಎಲ್ಲಾ ಬಿಜೆಪಿ ಶಾಸಕರಿಗೆ ವಿಧಾನಸಭೆಯನ್ನು ಪುನರೂರ್ಜಿತಗೊಳಿಸಬೇಕೆಂಬ ಇಚ್ಛೆಯಿದೆ  ಆದರೆ ಯಾರೂ ಈ ಬಗ್ಗೆ ಬಹಿರಂಗವಾಗಿ ಹೇಳುತ್ತಿಲ್ಲ'' ಎಂದು  ಜಮ್ಮು ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸಿದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಕ್ರಮವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿರುವ ಬಿಜೆಪಿ ಶಾಸಕ ಗಗನ್ ಭಗತ್ ಹೇಳಿದ್ದಾರೆ.

ಜಮ್ಮುವಿನ ಮೀಸಲು ಕ್ಷೇತ್ರವಾದ ರಣಬೀರ್ ಸಿಂಗ್ ಪುರ ಪ್ರತಿನಿಧಿಸುವ ಡಾ. ಭಗತ್ ಅವರ ಪ್ರಕಾರ ರಾಜ್ಯಪಾಲರ ಕ್ರಮ `ಅಸಂವಿಧಾನಿಕ.' ನ್ಯಾಯಾಲಯ ಈ ತೀರ್ಮಾನವನ್ನು ರದ್ದುಗೊಳಿಸಬಹುದೆಂದು ಅವರು ಆಶಾವಾದ ವ್ಯಕ್ತಪಡಿಸುತ್ತಾರೆ. “ಅವರು ನಮ್ಮ ಪಕ್ಷದವರೇ ಆಗಿರಬಹುದು ಆದರೆ ಅವರು  ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ ಇಂತಹ ಕ್ರಮ ಸರಿಯಲ್ಲ” ಎಂದು ಅವರು ಹೇಳಿದ್ದಾರೆ.

ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಬಿಜೆಪಿಗೆ ವಿರುದ್ಧವಾಗಿ ಹೋಗಿರುವುದರಿಂದ ಪಕ್ಷ ತ್ಯಜಿಸುವ ಯೋಚನೆಯಿದೆಯೇ ಎಂಬ ಪ್ರಶ್ನೆಗೆ, ``ರಾಜ್ಯಪಾಲರ ಕ್ರಮ ಪ್ರಶ್ನಿಸುವುದು ನನ್ನ ಮೂಲಭೂತ ಹಕ್ಕು ಎಂದು ಪಕ್ಷಕ್ಕೆ ಹೇಳಿದ್ದೇನೆ. ನಾನು ಪ್ರಶ್ನೆಗಳನ್ನು ಕೇಳುತ್ತೇನೆ. ಪಕ್ಷ ಇನ್ನೂ ಪ್ರತಿಕ್ರಿಯಿಸಿಲ್ಲ,'' ಎಂದಿದ್ದಾರೆ.

``ಇಂತಹ ಅಸಂವಿಧಾನಿಕ ಕ್ರಮಗಳು ಪ್ರಜಾಸತ್ತೆಯನ್ನು ದುರ್ಬಲಗೊಳಿಸುತ್ತವೆ. ಇದರಿಂದ ನಮಗೆ ಸಮಸ್ಯೆಗಳು ಸೃಷ್ಟಿಯಾಗಿವೆ. ಈ ಹಿಂದೆ ನಡೆದ ಪ್ರಜಾಸತ್ತೆ ವಿರೋಧಿ ಕ್ರಮಗಳ ಪರಿಣಾಮವನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ.  ನಾವು ಹಿಂದಿನ ತಪ್ಪುಗಳಿಂದ ಪಾಠ ಕಲಿಯಬೇಕಿತ್ತು ಆದರೆ ಅದೇ ತಪ್ಪುಗಳನ್ನು ಮಾಡುತ್ತಿದ್ದೇವೆ,'' ಎಂದು ಅವರು ಹೇಳಿದ್ದಾರೆ.

ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಜತೆಯಾಗುತ್ತಿರುವುದು ಅಪವಿತ್ರ ಮೈತ್ರಿ ಎಂದು ರಾಜ್ಯಪಾಲರು ಹೇಳಿರುವುದನ್ನೂ ಪ್ರಶ್ನಿಸಿದ ಭಗತ್, ``ಇದು ವಿಚಿತ್ರ ಹೇಳಿಕೆ, ಪರಸ್ಪರ ಭಿನ್ನ ಸಿದ್ಧಾಂತದ ಬಿಜೆಪಿ ಮತ್ತು ಪಿಡಿಪಿ ಈ ಹಿಂದೆ ಮೈತ್ರಿ ಮಾಡಿದಾಗ ಅದು ಪವಿತ್ರ ಮೈತ್ರಿಯಾಗಿತ್ತು. ಈ ಮೈತ್ರಿಗೂ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್ ಮೈತ್ರಿಗೆ ಏನು ವ್ಯತ್ಯಾಸ?'' ಎಂದು ಪ್ರಶ್ನಿಸಿದರು.

ಹೊಸ ಮೈತ್ರಿ ಕೂಟಕ್ಕೆ ಸದನದಲ್ಲಿ ವಿಶ್ವಾಸಮತ ಎದುರಿಸಲು ಹೇಳಿದ್ದರೆ ಅದು ಸೂಕ್ತ ಕ್ರಮವಾಗುತ್ತಿತ್ತು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News