ಬಿಬಿಎಂಪಿ ಸಘಾಯ್ ಪುರ ವಾರ್ಡ್ ಕಾರ್ಪೊರೇಟರ್ ನಿಧನ

Update: 2018-12-06 15:19 GMT

ಬೆಂಗಳೂರು, ಡಿ.6: ಅನಾರೋಗ್ಯದ ಕಾರಣ ಬಿಬಿಎಂಪಿಯ ಸಗಾಯಪುರ ವಾರ್ಡ್ ಸದಸ್ಯ ವಿ.ಏಳುಮಲೈ(40) ಗುರುವಾರ ನಿಧನರಾಗಿದ್ದು, ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದಲೇ ಅವರು ಸಾವನ್ನಪ್ಪಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಪಕ್ಷೇತರರಾಗಿ ಗೆದ್ದಿದ್ದ ಏಳುಮಲೈ ಅವರಿಗೆ ತಿಂಗಳ ಹಿಂದೆ ಮೂಗಿನಲ್ಲಿ ಗುಳ್ಳೆಯೊಂದು ಕಾಣಿಸಿಕೊಂಡಿತ್ತು. ನಗರದ ಸಂತೋಷ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ಅರಿವಳಿಕೆ ಮದ್ದು ನೀಡುವಾಗ ವ್ಯತ್ಯಯ ಉಂಟಾಗಿ ಅವರು ಕೋಮಾ ಸ್ಥೀತಿಗೆ ತಲುಪಿದ್ದರು ಎನ್ನಲಾಗಿದೆ. ಬಳಿಕ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳುಮಲೈ ಅವರು ಮುಂಜಾನೆ 1:30ರಲ್ಲಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೂಲತಃ ಕಾಂಗ್ರೆಸಿಗರಾಗಿದ್ದ ಏಳುಮಲೈ ಅವರು ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಸದಸ್ಯರಾಗಿ ಸ್ಪರ್ಧಿಸಿ ಪ್ರಮುಖ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಪರಾಭವಗೊಳಿಸಿ ಬಿಬಿಎಂಪಿ ಸದಸ್ಯರಾಗಿದ್ದರು. ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಆಡಳಿತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಏಳುಮಲೈ ಅವರು ಬಿಬಿಎಂಪಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

5 ಮಂದಿ ಮೃತ್ಯು: ಕಳೆದ ಮೂರು ವರ್ಷಗಳಲ್ಲಿ ನಾಲ್ವರು ಬಿಬಿಎಂಪಿ ಸದಸ್ಯರು ಸೇರಿದಂತೆ ಇಬ್ಬರು ಮಹಿಳಾ ಕಾರ್ಪೊರೇಟರ್‌ಗಳ ಪತಿಯಂದಿರು ಸಾವನ್ನಪ್ಪಿದ್ದಾರೆ.

ಲಕ್ಕಸಂದ್ರ ವಾರ್ಡ್‌ನ ಬಿಜೆಪಿ ಸದಸ್ಯರಾಗಿದ್ದ ಮಹೇಶ್ ಅವರು ಮೈಸೂರು ಪ್ರವಾಸದಿಂದ ಹಿಂದಿರುಗುವ ವೇಳೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಬಿನ್ನಿಪೇಟೆ ವಾರ್ಡ್ ಕಾಂಗ್ರೆಸ್ ಸದಸ್ಯೆ ಮಹದೇವಮ್ಮ ಅವರು ತಿರುಪತಿ ಪ್ರವಾಸದ ವೇಳೆ ಹೃದಯಾಘಾತವಾಗಿ ಸಾವನ್ನಪ್ಪಿದ್ದರು.

ಇತ್ತೀಚೆಗೆ ಬಿಬಿಎಂಪಿಯ ಉಪಮಹಾಪೌರರಾಗಿ ಆಯ್ಕೆಯಾಗಿದ್ದ ಕಾವೇರಿಪುರ ವಾರ್ಡ್ ರಮಿಳಾ ಉಮಾಶಂಕರ್ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದರು. ಈ ಮೂವರ ಸಾವಿನಿಂದ ಚೇತರಿಸಿಕೊಳ್ಳುವ ಮುನ್ನವೇ ಸಗಾಯಪುರಂ ವಾರ್ಡ್ ಪಕ್ಷೇತರ ಸದಸ್ಯ ಏಳುಮಲೈ ಅವರು ಇಹಲೋಕ ತ್ಯಜಿಸಿದ್ದಾರೆ. ಕೆಂಪಾಪುರ ಅಗ್ರಹಾರ ವಾರ್ಡ್ ಪಕ್ಷೇತರ ಸದಸ್ಯೆ ಗಾಯತ್ರಿ ಅವರ ಪತಿ ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದರು.

ಸಂತಾಪ: ಏಳುಮಲೈ ಅವರ ಅಕಾಲಿಕ ನಿಧನಕ್ಕೆ ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ರಜೆ ಘೋಷಣೆ

ಏಳುಮಲೈ ಅವರ ನಿಧನದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಚೇರಿಗೆ ಗುರುವಾರ ಮತ್ತು ಶುಕ್ರವಾರ ರಜೆ ನೀಡಲಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News