ಮೇಕೆದಾಟು ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಪಡೆಯುವ ಅಗತ್ಯ ಇಲ್ಲ: ಸಿದ್ದರಾಮಯ್ಯ

Update: 2018-12-06 14:15 GMT

ಬೆಂಗಳೂರು, ಡಿ. 6: ಮೇಕೆದಾಟು ಯೋಜನೆ ನಮ್ಮ ಸರಕಾರದ ಮಹತ್ವಾಕಾಂಕ್ಷಿ ಯೋಜನೆ. ಉದ್ದೇಶಿತ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ. ಆದರೂ, ತಮಿಳುನಾಡು ರಾಜಕೀಯ ಉದ್ದೇಶಕ್ಕಾಗಿ ಯೋಜನೆ ವಿರುದ್ಧ ತಕರಾರು ತೆಗೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ದೂರಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಮಾಜಿ ಸಿಎಂಗಳು, ಮಾಜಿ ಸಚಿವರು, ಕಾನೂನು ತಜ್ಞರ ಸಭೆ ಬಳಿಕ ಮಾತನಾಡಿದ ಅವರು, ನಮ್ಮ ವ್ಯಾಪ್ತಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಸುಪ್ರೀಂ ಕೋರ್ಟ್, ನ್ಯಾಯ ಮಂಡಳಿ ಆದೇಶವೂ ನಮಗೆ ಪೂರಕವಾಗಿದೆ. ಯೋಜನೆ ಬೇಡ ಎಂದು ಎಲ್ಲೂ ಉಲ್ಲೇಖಿಸಿಲ್ಲ. ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಪಡೆಯುವ ಅವಶ್ಯಕತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆಗೆ ತಮಿಳುನಾಡಿನ ತಕರಾರು ತೆಗೆಯಲು ಯಾವುದೇ ಆಧಾರಗಳಿಲ್ಲ. ನ್ಯಾಯ ಮಂಡಳಿ, ಸುಪ್ರೀಂ ಕೋರ್ಟ್ ಆದೇಶಗಳೂ ಸ್ಪಷ್ಟವಾಗಿವೆ. ನಮ್ಮ ಯೋಜನೆ ನ್ಯಾಯಯುತ. ಹೀಗಾಗಿ ನಮ್ಮ ವಕೀಲರು ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮನವೊಲಿಸುವ ಕೆಲಸ ಮಾಡಬೇಕೆಂದು ಅವರು ಹೇಳಿದರು.

ಮೇಕೆದಾಟು ಯೋಜನೆಗೆ ಒಂದು ವೇಳೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದರೆ ಕಷ್ಟವಾಗುತ್ತದೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕು. ರಾಜ್ಯದ ಪರ ವಕೀಲರ ತಂಡ ಈ ಬಗ್ಗೆ ಅಗತ್ಯ ಮುನ್ನಚ್ಚರಿಕೆ ವಹಿಸಬೇಕು ಎಂದು ಸಿದ್ದರಾಮಯ್ಯ ಇದೇ ವೇಳೆ ಸಲಹೆ ನೀಡಿದರು.

ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ತಮಿಳುನಾಡು ಈಗಿನಿಂದಲೇ ಕರ್ನಾಟಕ ರಾಜ್ಯದ ಉದ್ದೇಶಿತ ಮೇಕೆದಾಟು ಯೋಜನೆ ವಿರುದ್ಧ ಧ್ವನಿ ಎತ್ತಿದೆ ಎಂಬ ವಿಚಾರವನ್ನು ವಕೀಲರ ತಂಡ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News