ಮೇಕೆದಾಟು ಯೋಜನೆ: ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

Update: 2018-12-06 14:21 GMT

ಬೆಂಗಳೂರು, ಡಿ. 6: ಮೇಕೆದಾಟು ಯೋಜನೆ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಾಜಿ ಸಿಎಂಗಳು, ನೀರಾವರಿ ಸಚಿವರುಗಳು ಹಾಗೂ ಕಾನೂನು ತಜ್ಞರ ಮಹತ್ವದ ಸಭೆ ನಡೆಸಲಾಯಿತು.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಮುಖಂಡರಾದ ಎಚ್.ಕೆ. ಪಾಟೀಲ್, ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಸಚಿವರಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಸರಕಾರ ಅನಗತ್ಯ ತಕರಾರು ತೆಗೆಯಲು ಮುಂದಾಗಿದ್ದು, ತ್ವರಿತಗತಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಸಂಬಂಧ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಆತಂಕವಿಲ್ಲ. ಈ ಬಗ್ಗೆ ತಮಿಳುನಾಡಿನ ಮನವೊಲಿಕೆಗೆ ರಾಜ್ಯ ಸರಕಾರ ನಿರ್ಧರಿಸಿದೆ.

ತಮಿಳುನಾಡಿಗೆ ಅನುಕೂಲ: ಮೇಕೆದಾಟು ಯೋಜನೆಯನ್ನು ನಮ್ಮ ಜಾಗದಲ್ಲಿ ಕೈಗೊಳ್ಳುತ್ತಿದ್ದು, ಇದಕ್ಕೆ ತಮಿಳುನಾಡು ತಕರಾರು ಸರಿಯಲ್ಲ. ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಮಾತ್ರ ಬಳಸಿಕೊಳ್ಳುತ್ತಿದ್ದು, ಇದರಿಂದ ತಮಿಳುನಾಡಿಗೆ ಅನುಕೂಲವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಸಭೆಯ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ನೀರಾವರಿ ಸಚಿವರು ಹಾಗೂ ಕಾನೂನು ತಜ್ಞರ ಸಭೆ ಬಳಿಕ ಮಾತನಾಡಿದ ಅವರು, ತಮಿಳುನಾಡು ರಾಜಕೀಯ ಲಾಭಕ್ಕಾಗಿ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದರು.

ಮೇಕೆದಾಟು ಯೋಜನೆಯಿಂದ ತಮಿಳುನಾಡು ಸರಕಾರಕ್ಕೆ ಎಳ್ಳಷ್ಟು ನಷ್ಟ ಆಗುವುದಿಲ್ಲ. ಬದಲಿಗೆ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಲಾಭವಾಗುತ್ತದೆ. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲು ಸಿದ್ಧ. ಕೇಂದ್ರ ಸರಕಾರವೇ ಉಭಯ ರಾಜ್ಯಗಳ ಸಿಎಂಗಳನ್ನು ಆಹ್ವಾನಿಸಿ ಚರ್ಚಿಸಲಿ ಎಂದು ಹೇಳಿದರು.

ತಮಿಳುನಾಡು ಸರಕಾರ ಮೇಕೆದಾಟು ವಿಚಾರ ಸಂಬಂಧ ಚರ್ಚಿಸಲು ವಿಶೇಷ ಅಧಿವೇಶನ ಕರೆದಿದೆ. ಈ ಯೋಜನೆಯ ನೀರನ್ನು ನೀರಾವರಿಗೆ ಬಳಸುವುದಿಲ್ಲ. ಕೇವಲ ಕುಡಿಯುವ ನೀರಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ತಮಿಳುನಾಡು ಕೋರ್ಟ್‌ಗೆ ಹೋಗುವುದು ಸರಿಯಲ್ಲ ಎಂದು ಶಿವಕುಮಾರ್ ಮನವಿ ಮಾಡಿದರು.

ಈಗಾಗಲೇ 5,916ಕೋಟಿ ರೂ.ವೆಚ್ಚದ ಯೋಜನೆಯ ಪ್ರಾಥಮಿಕ ವರದಿ ಸಿದ್ಧವಾಗಿದೆ. ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. 4,996 ಹೆಕ್ಟೇರ್ ಜಮೀನು ಈ ಯೋಜನಾ ವ್ಯಾಪ್ತಿಗೆ ಬರಲಿದ್ದು, ಆ ಪೈಕಿ 380 ಹೆಕ್ಟೇರ್ ಕಂದಾಯ ಇಲಾಖೆಗೆ ಸೇರಿದ್ದು, ಉಳಿದ ಭೂಮಿ ಅರಣ್ಯ ಇಲಾಖೆಗೆ ಸೇರಿದೆ. ಕೇಂದ್ರ ಜಲ ಆಯೋಜದ ಒಪ್ಪಿಗೆ ಸಿಕ್ಕಿದ್ದು, ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News