ರಾಜ್ಯದ ಪ್ರತಿ ಶಾಲೆಯಲ್ಲೂ ‘ಡಿಡಿ ರೋಶಿನಿ’ ವಾಹಿನಿ: ಸಿಎಂ ಕುಮಾರಸ್ವಾಮಿ

Update: 2018-12-06 14:32 GMT

ಬೆಂಗಳೂರು, ಡಿ.6: ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಸರಕಾರಿ ಶಾಲೆಯಲ್ಲೂ ‘ದೂರದರ್ಶನ ರೋಶಿನಿ’ ವಾಹಿನಿ ಪ್ರಸಾರಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ಗುರುವಾರ ಇಲ್ಲಿನ ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಬಿಎಂಪಿ, ಮೈಕ್ರೋಸ್‌ಟಾ ಹಾಗೂ ಟೆಕ್ ಅವಾಂತ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ, ಡಿಡಿ ರೋಶಿನಿ ವಾಹಿನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಬಿಎಂಪಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ರೋಶಿನಿ ಯೋಜನೆ ಸಹಕಾರಿಯಾಗಲಿದೆ. ಇದೇ ಮಾದರಿಯಲ್ಲಿ ಉಳಿದ ರಾಜ್ಯ ವ್ಯಾಪ್ತಿಯಲ್ಲಿನ ಸರಕಾರಿ ಶಾಲೆಗಳಿಗೂ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಶ್ರೀಮಂತರ ಮಕ್ಕಳಷ್ಟೇ ಅಲ್ಲ, ಬಡ-ಸಾಮಾನ್ಯ ವರ್ಗದ ಮಕ್ಕಳು ಗುಣಮಟ್ಟ ಹಾಗೂ ಇಂಗ್ಲಿಷ್ ಶಿಕ್ಷಣ ಪಡೆಯುವಂತೆ ಆಗಬೇಕು ಎಂದ ಅವರು, ಮಕ್ಕಳ ಪ್ರತಿಭೆಯನ್ನು ಹೊರತಂದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿಸಲು ಶಿಕ್ಷಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ನುಡಿದರು.

‘ಕಲಿಕೆಗೆ ಮಿತಿಯಿಲ್ಲ’ ಎಂಬ ಘೋಷವಾಕ್ಯದೊಂದಿಗೆ ಬಿಬಿಎಂಪಿ ರೋಶಿನಿ ಯೋಜನೆ ಜಾರಿಗೊಳಿಸುತ್ತಿದೆ. ಅದರಂತೆ ಮೈಕ್ರೋಸ್‌ಟಾ ಹಾಗೂ ಟೆಕ್ ಅವಾಂತ ಸಂಸ್ಥೆ ಸಹಯೋಗದಲ್ಲಿ ಬಿಬಿಎಂಪಿಯ ಎಲ್ಲ 156 ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸೆಟಲೈಟ್ ಶಿಕ್ಷಣ ನೀಡಲಾಗುತ್ತದೆ. ಜತೆಗೆ ಮನೆಯಲ್ಲಿ ಕುಳಿತು ಪಾಠ ಕೇಳುವ ವ್ಯವಸ್ಥೆಗಾಗಿ ದೂರದರ್ಶನ ಸಂಸ್ಥೆ ಬಿಬಿಎಂಪಿ ಶಾಲಾ ಮಕ್ಕಳಿಗಾಗಿಯೇ ರೋಶಿನಿ ಹೆಸರಿನಲ್ಲಿ ವಾಹಿನಿ ಆರಂಭಿಸಿದೆ. ಅದರ ಮೂಲಕ ವಿದ್ಯಾರ್ಥಿಗಳು ಶಾಲೆಯಲ್ಲಿ ನಡೆಯುವ ಪಾಠ, ಪರೀಕ್ಷೆಗೆ ಸಿದ್ಧತೆ ನಡೆಸುವುದು ಸೇರಿ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದೂರದರ್ಶನ ವಾಹಿನಿ ಪ್ರಧಾನ ನಿರ್ದೇಶಕಿ ಸುಪ್ರಿಯಾ ಸಾಹು, ಶಾಸಕ ರೋಶನ್ ಬೇಗ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಪ್ರಮುಖರಿದ್ದರು.

ದಿನಕ್ಕೆ ಮೂರು ತರಗತಿ:

ಡಿಡಿ ರೋಶಿನಿ ವಾಹಿನಿಯಲ್ಲಿ ದಿನಕ್ಕೆ ಮೂರು ಕ್ಲಾಸ್‌ಗಳು ನಡೆಯಲಿವೆ. ಅದರಂತೆ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಪ್ರಿಪರೇಟರಿ ಪಠ್ಯ, ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಿತ್ಯದ ಪಾಠ ಹಾಗೂ ಸಂಜೆ 5ರಿಂದ ರಾತ್ರಿ 10ರವರೆಗೆ ಹಿಂದಿನ ತರಗತಿಗಳ ಮರುಪ್ರಸಾರ ಮಾಡಲಾಗುತ್ತದೆ. ನಿತ್ಯ 18 ಗಂಟೆಗಳ ಕಾಲ ವಾಹಿನಿ ಮಕ್ಕಳ ಕಲಿಕೆಗೆ ವಿವಿಧ ವಿಷಯಗಳನ್ನು ಪ್ರಸಾರ ಮಾಡಲಿದೆ.

ಬಿಬಿಎಂಪಿಯ ಶಾಲಾ-ಕಾಲೇಜುಗಳು

* ಶಿಶು ವಿಹಾರ: 91

* ಪ್ರಾಥಮಿಕ ಶಾಲೆ: 15

* ಪ್ರೌಢಶಾಲೆ: 32

* ಪಿಯು ಕಾಲೇಜು: 13

* ಪದವಿ ಕಾಲೇಜು: 04

* ಭಾರತೀಯ ವಿದ್ಯಾಭವನ: 01

* ಒಟ್ಟು 156

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News