ಕೊಡಗು ಸಂತ್ರಸ್ತರ ಮನೆ ನಿರ್ಮಾಣಕ್ಕೆ ಡಿ.7ರಂದು ಸಿಎಂ ಶಿಲಾನ್ಯಾಸ: ಸಾ.ರಾ.ಮಹೇಶ್

Update: 2018-12-06 14:50 GMT

ಬೆಂಗಳೂರು, ಡಿ.6: ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗಾಗಿ ತಲಾ ಎರಡು ಕೋಣೆ(ಡಬಲ್ ಬೆಡ್‌ರೂಂ)ಗಳನ್ನು ಒಳಗೊಂಡ 840 ಮನೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಡಿ.7ರಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 9.85 ಲಕ್ಷ ರೂ.ಗಳಲ್ಲಿ ಒಂದು ಮನೆ ನಿರ್ಮಾಣವಾಗಲಿದ್ದು, ಆರು ತಿಂಗಳಲ್ಲಿ ಎಲ್ಲ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

31.61 ಕೋಟಿ ರೂ.ವೆಚ್ಚದಲ್ಲಿ ಐದು ಕಡೆ ಬಡಾವಣೆ ಅಭಿವೃದ್ಧಿಪಡಿಸಲಾಗುವುದು. ಸಂತ್ರಸ್ತರ ಬೇಡಿಕೆಗೆ ಅನುಗುಣವಾಗಿ ಅವರ ಬಯಸಿದ ಕಡೆ ಮನೆ, ನಿವೇಶನ ಒದಗಿಸಲಾಗುತ್ತಿದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆಯ ಅಧೀನದಲ್ಲಿದ್ದ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ ಎಂದು ಸಾ.ರಾ.ಮಹೇಶ್ ತಿಳಿಸಿದರು.

ಬೆಳೆ ಪರಿಹಾರ ಹಾಗೂ ಭೂ ಕುಸಿತ ಸರಿಪಡಿಸುವ ಕೆಲಸ ಆಗಬೇಕಿದೆ. ಮುಖ್ಯಮಂತ್ರಿಯ ನಿರ್ದೇಶನದಂತೆ ಆ ಕೆಲಸವನ್ನು ತ್ವರಿತವಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News