ಬುಲಂದ್‌ಶಹರ್ ಹಿಂಸಾಚಾರ: ಸುಬೋಧ್ ಕುಮಾರ್ ಕುಟುಂಬವನ್ನು ಭೇಟಿಯಾದ ಮುಖ್ಯಮಂತ್ರಿ ಆದಿತ್ಯನಾಥ್

Update: 2018-12-07 05:13 GMT

ಲಕ್ನೊ, ಡಿ. 6: ಗೋಹತ್ಯೆ ವದಂತಿ ಹಿನ್ನೆಲೆಯಲ್ಲಿ ಸಂಭವಿಸಿದ ಹಿಂಸಾಚಾರದ ಸಂದರ್ಭ ಹತ್ಯೆಯಾದ ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಕುಟುಂಬವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಗುರುವಾರ ಭೇಟಿಯಾಗಿದ್ದಾರೆ. ಲಕ್ನೊದ ಕಾಳಿದಾಸ ಮಾರ್ಗದಲ್ಲಿರುವ ಸುಬೋಧ್ ಕುಮಾರ್ ಸಿಂಗ್ ಅವರ ನಿವಾಸದಲ್ಲಿ ಅವರ ಕುಟುಂಬವನ್ನು ಮುಖ್ಯಮಂತ್ರಿ ಭೇಟಿಯಾದರು. ಪೊಲೀಸ್ ಇನ್ಸ್‌ಪೆಕ್ಟರ್ ಹತ್ಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಸುಬೋಧ್ ಕುಮಾರ್ ಸಿಂಗ್ ಪತ್ನಿಗೆ 40 ಲಕ್ಷ ರೂ. ಹಾಗೂ ಪೋಷಕರಿಗೆ 10 ಲಕ್ಷ ರೂ. ಪರಿಹಾರ ಧನ ಪ್ರಕಟಸಿದ್ದಾರೆ. ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಕೆಲಸ ನೀಡುವ ಭರವಸೆ ನೀಡಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಜಾನುವಾರುಗಳ ಕಳೇಬರ ಪತ್ತೆಯಾದ ಬಗ್ಗೆ ವದಂತಿ ಹರಡಿದ ಬಳಿಕ ಡಿಸೆಂಬರ್ 3ರಂದು ನಡೆದ ಹಿಂಸಾಚಾರದಲ್ಲಿ ಸುಬೋಧ್ ಕುಮಾರ್ ಬಲಿಯಾಗಿದ್ದರು. ಸ್ಥಳೀಯ ನಿರ್ದಿಷ್ಟ ಗುಂಪು ಹತ್ಯೆಗೈದ ಗೋವುಗಳ ಕಳೇಬರ ಇದು. ಅಕ್ರಮವಾಗಿ ಗೋಹತ್ಯೆ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಹಿಂಸಾಚಾರದಲ್ಲಿ ಓರ್ವ ಯುವಕ ಕೂಡ ಮೃತಪಟ್ಟಿದ್ದ. ಸುಬೋಧ್ ಕುಮಾರ್ ಅವರು ತಲೆಗೆ .35 ಎಂ. ಎಂ. ಬುಲೆಟ್ ತಗಲಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ದೃಢಪಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇದುವರೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News