ವಿವಿಐಪಿ ಕಾಪ್ಟರ್ ಹಗರಣದ ವಿಚಾರಣೆ: ಲಂಚ ಸ್ವೀಕಾರ ನಿರಾಕರಿಸಿದ ಮೈಕಲ್

Update: 2018-12-07 05:01 GMT

ಹೊಸದಿಲ್ಲಿ, ಡಿ. 6: ಯುಪಿಎ ಸರಕಾರದಿಂದ ಅಥವಾ ಸರಕಾರದ ಇತರ ಅಧಿಕಾರಿಗಳಿಂದ ಲಂಚ ಸ್ವೀಕರಿಸಿರುವುದನ್ನು ಬಹುಕೋಟಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದದ ಮಧ್ಯವರ್ತಿ ಎಂದು ಹೇಳಲಾಗಿರುವ ಕ್ರಿಶ್ಚಿಯನ್ ಮೈಕಲ್ ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಆದರೆ, ಅಗಸ್ಟಾವೆಸ್ಟ್‌ಲ್ಯಾಂಡ್‌ನಿಂದ ಸಲಹಾ ಶುಲ್ಕ ಸ್ವೀಕರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಯುಎಇ ದುಬೈ ಅಧಿಕಾರಿಗಳು ಭಾರತಕ್ಕೆ ಗಡಿಪಾರು ಮಾಡಿದ ಬಳಿಕ ಮೈಕಲ್ ಅವರನ್ನು ಬುಧವಾರ ಸಿಬಿಐ ಕಸ್ಟಡಿಗೆ ನೀಡಲಾಯಿತು. 57ರ ಹರೆಯದ ಮೈಕಲ್ ಅವರು ಸಿಬಿಐಯ ಕೇಂದ್ರ ಕಚೇರಿಗೆ ತಲುಪಿದಾಗ ತೀವ್ರ ಆತಂಕಕ್ಕೆ ಹಾಗೂ ಕೋಪಕ್ಕೆ ಒಳಗಾದರು. ಕೂಡಲೇ ಆಗಮಿಸಿದ ವೈದ್ಯರು ಅವರ ತಪಾಸಣೆ ನಡೆಸಿದರು. ಚಿಕಿತ್ಸೆಯ ಬಳಿಕ ಹಣ ವರ್ಗಾವಣೆ ಹಾಗೂ ಡೈರಿಯಲ್ಲಿ ಗುರುತಿಸಿದ ಸಾಕ್ಷಗಳ ದಾಖಲೆಗಳನ್ನು ಗುರುತಿಸುವುದಕ್ಕೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳಲಾಯಿತು. ಈ ಸಂದರ್ಭ ಮೈಕಲ್ ತನಗೆ ಡಿಸ್ಲೆಕ್ಸಿಯಾ (ಬರೆದುದನ್ನು ವಿವರಿಸಲು ಕಷ್ಟವಾಗುವ ಸಮಸ್ಯೆ) ಇದ್ದು, ಡೈರಿಯಲ್ಲಿ ಬರೆದಿರುವುದು ಮತ್ತೋರ್ವ ಮದ್ಯವರ್ತಿ ಗಿಡೊ ಹಶ್ಚೆ ಎಂದು ಬಾಯಿ ಬಿಟ್ಟಿದ್ದಾರೆ. ಲಂಚ ನೀಡಿರುವ ಬಗ್ಗೆ ಬರೆಯಲಾದ ಡೈರಿಯ ಟಿಪ್ಪಣಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿವಿಐಪಿ ಕಾಪ್ಟರ್‌ನ ಹಿಂದಿರುವ ಪ್ರಮುಖ ಚಾಲನಾ ಶಕ್ತಿ ಎಂದು ಉಲ್ಲೇಖಿಸಲಾಗಿದೆ. ತನ್ನೊಂದಿಗೆ ಸಂಬಂಧ ಹೊಂದಿರುವ ಭಾರತ ರಾಜಕಾರಣಿಗಳನ್ನು ರಕ್ಷಿಸಲು ಮತ್ತೋರ್ವ ಮದ್ಯವರ್ತಿ ಗಿಡೆ ಹಶ್ಚೆ ಹೆಸರನ್ನು ಮೈಕಲ್ ತಿಳಿಸಿರುವ ಸಾಧ್ಯತೆ ಇದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News