ನಮ್ಮ ಸಂವಿಧಾನ ಮತ್ತು ಮನುವಾದಿಗಳು ಸೃಷ್ಟಿಸಿರುವ ಗಂಡಾಂತರ

Update: 2018-12-06 18:43 GMT

ನಮ್ಮ ದೇಶದ ಪ್ರಸ್ತುತ ಸಂದರ್ಭ ಮತ್ತು ಸನ್ನಿವೇಶಗಳು ಭಯ ಹಾಗೂ ಆತಂಕಕಾರಿಯಾಗಿವೆ. ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಗೋರಕ್ಷಣೆಯ ನೆಪದಲ್ಲಿ ಹಿಂಸೆ, ಕೊಲೆ ಪ್ರತಿನಿತ್ಯವೂ ಸಹಜವಾಗಿದೆ. ಎಲ್ಲೆಡೆಯೂ ಅಭದ್ರತೆಯ ವಾತಾವರಣ ಸೃಷ್ಟಿಯಾಗಿ ಯಾವುದನ್ನೂ ಪ್ರಶ್ನಿಸುವಂತಿಲ್ಲ, ಪ್ರತಿಭಟಿಸುವಂತಿಲ್ಲ. ಇಂತಹ ಅನಾರೋಗ್ಯಕರ ವಾತಾವರಣ ಸೃಷ್ಟಿಸುವ ಸ್ಥಾಪಿತ ಸಂಪ್ರದಾಯವಾದಿ ಹಿತಾಸಕ್ತಿಗಳು ಇಂದು ದೇಶದೆಲ್ಲೆಡೆ ವಿಜೃಂಭಿಸುತ್ತಿವೆ.

ದೇಶದ ಮೂಲ ಕಾನೂನಾದ ಸಂವಿಧಾನವನ್ನೇ ಧಿಕ್ಕರಿಸಿ ಮೂಲಭೂತವಾದಿಗಳು ಕಾನೂನಿನ ಭಯವಿಲ್ಲದೆ ಮನಬಂದಂತೆ ಹಿಂಸಾತ್ಮಕವಾಗಿ ಪುಂಡಾಟಿಕೆ ನಡೆಸುತ್ತಾ ದೇಶದೆಲ್ಲೆಡೆ ಮನುವಾದವನ್ನು ಪುನಃ ಸ್ಥಾಪಿಸುವ ಹುನ್ನಾರವನ್ನು ನಡೆಸುತ್ತಿದ್ದಾರೆೆ.

ಇಂತಹ ದುಷ್ಕೃತ್ಯಕ್ಕೆ ಪ್ರಭುತ್ವದ ಸಹಕಾರ ಮತ್ತು ಪ್ರೋತ್ಸಾಹ ಯಾವುದೇ ಅಡೆತಡೆಯಿಲ್ಲದೇ ದೊರೆಯುತ್ತಿದೆ. ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಸಂವಿಧಾನ ದಿನಾಚರಣೆ ಆಚರಿಸಲು, ಗಣರಾಜ್ಯೋತ್ಸವ ಆಚರಿಸಲು ಮುಂದಾಗುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಸಂವಿಧಾನವು ಯಾವ ಪರಿಸ್ಥಿತಿಯಲ್ಲಿದೆ ಎಂಬುದನ್ನು ಒಮ್ಮೆ ಅವಲೋಕಿಸೋಣ.

ನಮ್ಮ ದೇಶದ ಸಂವಿಧಾನದ ಪೂರ್ವಪೀಠಿಕೆಯು ಇಂಡಿಯಾ ಒಂದು ಸರ್ವತಂತ್ರ ಸ್ವತಂತ್ರ ಸಾರ್ವಭೌಮ ರಾಷ್ಟ್ರ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಘೋಷಿಸಿ, ತನ್ನ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನಾ ಸ್ವಾತಂತ್ರ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ ಎಲ್ಲರಿಗೂ ದೊರೆಯುವಂತೆ ಮಾಡಲು, ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿ, ಭ್ರಾತೃತ್ವ ಭಾವನೆಯನ್ನು ಎಲ್ಲರಲ್ಲೂ ವೃದ್ಧಿಗೊಳಿಸುವ ಭರವಸೆಯನ್ನು ನೀಡಿದೆ. ಜನವರಿ 26, 1950ರಂದು ನಮ್ಮ ಸಂವಿಧಾನವನ್ನು ಅಧಿಕೃತವಾಗಿ ಆಚರಣೆಗೆ/ಜಾರಿಗೆ ತರಲಾಯಿತು. ಈ ಕಾರಣಕ್ಕೆ ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸುವ ಮೂಲಕ ಸಂವಿಧಾನದ ಬಗ್ಗೆ, ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್‌ರವರ ಬಗ್ಗೆ ಸಂವಾದಗಳು, ಚರ್ಚೆಗಳು ನಡೆಯುತ್ತವೆ. ಇದೇ ಸಂದರ್ಭದಲ್ಲಿ ಹಲವಾರು ಸಭೆ ಸಮಾರಂಭಗಳು ಮತ್ತು ವೇದಿಕೆಗಳಲ್ಲಿ ಭಾಷಣ ಮಾಡಲಾಗುತ್ತದೆ. ಈ ಸಭೆ ಸಮಾರಂಭಗಳಲ್ಲಿ ಸಂವಿಧಾನದ ಬಗ್ಗೆ, ಅಂಬೇಡ್ಕರ್‌ರವರ ಬಗ್ಗೆ ಭಾಷಣ ಮಾಡುವ ರಾಜಕೀಯ ನಾಯಕರು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ತಾವು ಎಷ್ಟು ಬದ್ಧರಾಗಿ ನಡೆದುಕೊಂಡಿದ್ದೇವೆ ಎಂಬುದರ ಬಗ್ಗೆ ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲ. ನಿಜ ಜೀವನದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿಯೇ ನಡೆದುಕೊಳ್ಳುವ ಇಂತಹ ಮಹನೀಯರಿಂದ ನಾವು ಸಂವಿಧಾನದ ಬಗ್ಗೆ ಪಾಠ ಕೇಳುವಂತಹ ದುರ್ಗತಿ ಒದಗಿ ಬಂದಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ವ್ಯಂಗ್ಯವಲ್ಲದೇ ಮತ್ತೇನೂ ಅಲ್ಲ.

ಸಂವಿಧಾನದ ನಿರ್ಮಾತೃ ಅಂಬೇಡ್ಕರ್‌ರವರು ಈ ದೇಶವನ್ನು ಸಂಪ್ರದಾಯಸ್ಥ ಮನುವಾದಿಗಳಿಂದ ರಕ್ಷಿಸಿ, ಈ ದೇಶದ ಬಹುಸಂಖ್ಯಾತರಾದ ದುರ್ಬಲರು, ಅಶಕ್ತರು, ಬಡವರು, ಧ್ವನಿ ಇಲ್ಲದವರಿಗೆ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುವ ಸದುದ್ದೇಶದಿಂದ ಸಂವಿಧಾನದಲ್ಲಿ ‘ಸಮಾನತೆ’, ‘ಸ್ವಾತಂತ್ರ’, ‘ಭ್ರಾತೃತ್ವ’, ‘ಜಾತ್ಯತೀತ’ ಹಾಗೂ ಪ್ರಜಾಸತ್ತಾತ್ಮಕ ವೌಲ್ಯಗಳನ್ನು ಅಳವಡಿಸಿದರು. ಈ ದೇಶವು ಧರ್ಮದ ಆಧಾರದ ಮೇಲೆ ರಚನೆಯಾಗದೆ ಸರ್ವರಿಗೂ ನ್ಯಾಯ, ಅವಕಾಶ ಒದಗಿಸುವ, ಗೌರವದ ಬದುಕು ಕಟ್ಟಿಕೊಳ್ಳಲು ಆರೋಗ್ಯಕರ ವಾತಾವರಣ ಸೃಷ್ಟಿಗೆ ಕಾರಣವಾಗುವ ಪ್ರಜಾಪ್ರಭುತ್ವದ ಜಾತ್ಯತೀತ ಸದೃಢ ವ್ಯವಸ್ಥೆಯ ಆಧಾರದ ಮೇಲೆ ರಚನೆಯಾಗುವಂತೆ ಮಾಡಿದರು. ಮನುವಾದಿಗಳ ವರ್ಣವ್ಯವಸ್ಥೆಯಿಂದ ಶೋಷಣೆ, ದಬ್ಬ್ಬಾಳಿಕೆಗೆ ಒಳಗಾದ ಶೋಷಿತ ಸಮುದಾಯವನ್ನು ರಕ್ಷಿಸಿ ದುರ್ಬಲರಿಗೆ ತಿರಸ್ಕೃತ ಮತ್ತು ಅಸ್ಪಶ್ಯ ಜಾತಿ ಜನರಿಗೆ ಮಾನವ ಸಹಜವಾಗಿ ದೊರೆಯಬೇಕಾಗಿರುವ ಮಾನವ ಹಕ್ಕುಗಳನ್ನು ಸಂವಿಧಾನದ ಮೂರನೇ ಭಾಗದ 14ರಿಂದ 32ರವರೆಗಿನ ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ಕಲ್ಪಿಸುವ ಮೂಲಕ ಈ ದೇಶದ ಬಹುಸಂಖ್ಯಾತ ದುರ್ಬಲ ವರ್ಗವನ್ನು ರಕ್ಷಿಸುವ (ಸಂವಿಧಾನಾತ್ಮಕವಾಗಿ) ಮಹತ್ವದ ಕಾರ್ಯವನ್ನು ಮಾಡಿದರು.

ಇಂತಹ ಮಾನವೀಯ ವೌಲ್ಯಗಳನ್ನು ಒಳಗೊಂಡಿರುವ ಸಮಾನತೆ ತತ್ವ ಸಾರುವ ಉತ್ತಮ ಸಂವಿಧಾನವು ಇಂದು ಮನುವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಅಪಾಯವನ್ನು ಎದುರಿಸುತ್ತಿದೆ. ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯವನ್ನು ಆಚರಣೆಗೆ ತರುವ ಸದುದ್ದೇಶವನ್ನು ಹೊಂದಿದ್ದರೆ ಈ ಮನುವಾದಿಗಳು ಪುನಃ ಶೋಷಣೆಯ, ದಬ್ಬಾಳಿಕೆಯ, ತಾರತಮ್ಯದ ಸಮಾಜವನ್ನು ಸೃಷ್ಟಿಸಲು ಹವಣಿಸುತ್ತಿದ್ದಾರೆ. ಅದಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುವುದು ನಿಜಕ್ಕೂ ಆತಂಕಕಾರಿಯಾದುದು.

ಧರ್ಮದ ಆಧಾರದ ಮೇಲೆ ಈ ದೇಶದ ಸಂವಿಧಾನವನ್ನು ರಚಿಸಿದರೆ ಮನುವಾದಿಗಳು ಪುನಃ ಅಟ್ಟಹಾಸ ಮೆರೆದು ದುರ್ಬಲರನ್ನು ಜಾತಿಯ ಆಧಾರದ ಮೇಲೆ ಶೋಷಿಸುವ ಸಾಧ್ಯತೆಗಳನ್ನು ಮುಂಚೆಯೇ ಅರಿತಿದ್ದ ಅಂಬೇಡ್ಕರ್‌ರವರು ಅಂತಹ ವಿಘಟನೆಗೆ ಅವಕಾಶ ಮಾಡಿಕೊಡದೇ ಎಲ್ಲರಿಗೂ ನೆಮ್ಮದಿಯ ಬದುಕು ಸಾಧ್ಯವಾಗಿಸುವ ಸಂವಿಧಾನವನ್ನು ರಚಿಸಿದರು. ಇದನ್ನು ಈ ದೇಶದ ಮನುಸ್ಮತಿ ಆರಾಧಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಆ ಕಾರಣಕ್ಕಾಗಿಯೇ ಪದೇ ಪದೇ ಸಂವಿಧಾನಕ್ಕೆ ಅವಮಾನಿಸುವಂತಹ, ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ಅವಮಾನಿಸುವಂತಹ ಕೀಳುಮಟ್ಟದ ಕೃತ್ಯಗಳಲ್ಲಿ ತೊಡಗಿ ಅದರಲ್ಲಿಯೇ ವಿಕೃತ ಸಮಾಧಾನವನ್ನು ಅನುಭವಿಸುತ್ತಿರುವ ಅನಾರೋಗ್ಯಕರ ಬೆಳವಣಿಗೆಗಳು ನಡೆಯುತ್ತಿರುವುದು ನಿಜಕ್ಕೂ ಖೇದಕರವಾದುದು.

ಸಂವಿಧಾನವು ದೇಶದ ಆಡಳಿತ ಯಂತ್ರಕ್ಕೆ ಯಾವ ರೀತಿಯಲ್ಲಿ ಆಡಳಿತ ನಡೆಸಬೇಕು ಎಂಬ ನಿರ್ದೇಶನ ನೀಡುತ್ತದೆ. ಮುಂದುವರಿದು ಈ ದೇಶದ ದುರ್ಬಲರನ್ನು, ಧ್ವನಿ ಇಲ್ಲದವರನ್ನು, ತಳ ಸಮುದಾಯವನ್ನು ರಕ್ಷಿಸಬೇಕು ಎಂದು ತಿಳಿಸುತ್ತದೆ. ಆದರೆ ದುರಂತ ನೋಡಿ, ಇಂಡಿಯಾದಲ್ಲಿ ಧರ್ಮದ ಹೆಸರಿನಲ್ಲಿ ಪ್ರಚೋದನೆ ಮಾಡಲಾಗುತ್ತದೆ. ಗೋ ರಕ್ಷಣೆಯ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಅಮಾಯಕರನ್ನು ಹೊಡೆದು ಕೊಲ್ಲಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ದುರ್ಬಲರ ರಕ್ಷಣೆಗೆ ಬರಬೇಕಾದ ಸರಕಾರ ಜಾಣ ಕುರುಡು ಪ್ರದರ್ಶಿಸಿ ವೌನವಾಗಿ ಎಲ್ಲಾ ಹಿಂಸಾತ್ಮಕ ಕೃತ್ಯಗಳಿಗೂ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿದೆ. ಇದು ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ವಾಸ್ತವ.

ಅಷ್ಟು ಮಾತ್ರವಲ್ಲ ದುರ್ಬಲರನ್ನು, ಬಡವರನ್ನು ಕೆಳಜಾತಿಯವರನ್ನು ವಿವಿಧ ರೀತಿಯಲ್ಲಿ ಬೀದಿಗಳಲ್ಲಿ ಹೊಡೆದು ಕೊಲ್ಲಲಾಗುತ್ತಿದೆ. ಸರಕಾರ ಇಂತಹ ಸಂದರ್ಭದಲ್ಲಿ ತಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸದೆ ತನ್ನ ಹೊಣೆಗೇಡಿತನವನ್ನು ಪ್ರದರ್ಶಿಸುತ್ತಿದೆ.

 ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವಿದೆ. ಸಂವಿಧಾನಾತ್ಮಕ ಸಂಸ್ಥೆಗಳಾದ ಸುಪ್ರೀಂ ಕೋರ್ಟ್‌ನಿಂದ ಹಿಡಿದು ಸಿಬಿಐ, ರಿಸರ್ವ್ ಬ್ಯಾಂಕ್‌ವರೆಗೂ ಎಲ್ಲಾ ಸಂವಿಧಾನಾತ್ಮಕ ಸಂಸ್ಥೆಗಳನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮತ್ತು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಒತ್ತಾಯಿಸುವ ಮತ್ತು ನಿರ್ದೇಶಿಸುವ ಮಟ್ಟಕ್ಕೆ ಈ ಎಲ್ಲಾ ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುವ ಮಟ್ಟಕ್ಕೆ ಕೇಂದ್ರ ಸರಕಾರ ಬಂದಿರುವುದರಿಂದ ಒಂದು ಕಡೆ ಧರ್ಮದ ಹೆಸರಿನಲ್ಲಿ ಹಿಂಸೆ, ಗೋ ರಕ್ಷಣೆಯ ಹೆಸರಿನಲ್ಲಿ ಕೊಲೆ, ಜಾತಿಯ ಹೆಸರಿನಲ್ಲಿ ಬಡವರನ್ನು, ದುರ್ಬಲರನ್ನು, ತಳ ಸಮುದಾಯದವರನ್ನು ಬೀದಿಯಲ್ಲಿ ಹೊಡೆದು ಕೊಂದು ವಿಕೃತಿ ಮೆರೆಯಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಯಾವುದೇ ಬೆಲೆ ಕೊಡದೇ ಲಂಗು ಲಗಾಮಿಲ್ಲದೇ ಗೂಂಡಾಗಳಂತೆ ವರ್ತಿಸುತ್ತಿರುವ ನಕಲಿ ದೇಶಭಕ್ತರು, ಪುಡಾರಿಗಳು, ಸಂಪ್ರದಾಯವಾದಿಗಳು, ಮನುವಾದಿಗಳು ಈ ದೇಶದ ಕಾನೂನಿಗೆ, ಸುಪ್ರೀಂ ಕೋರ್ಟ್‌ಗೆ ಅವಮಾನ ಮಾಡುತ್ತಿದ್ದರೆ ಅಂತಹ ಅವಮಾನಕ್ಕೆ ಸರಕಾರದ ಕುಮ್ಮಕ್ಕೂ ಸೇರಿ ಇವರ ಪುಂಡಾಟಿಕೆ ಎಲ್ಲೆ ಮೀರುತ್ತಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದಲ್ಲಿ ಸೃಷ್ಟಿಯಾಗಿರುವ ಅಸಹಿಷ್ಣುತೆಯ ವಾತಾವರಣಕ್ಕೆ ಕಾರಣವಾದ ಸರಕಾರ ನಮಗೆ ಬೇಕಾ? ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಇದಕ್ಕೂ ಉತ್ತರ ಸ್ಪಷ್ಟವಿದೆ. ಯಾವ ಸಂವಿಧಾನದಿಂದ ನಮಗೆ ರಕ್ಷಣೆ ಸಿಗಬೇಕಿತ್ತೋ ಅದೇ ಸಂವಿಧಾನವನ್ನು ಮನುವಾದಿಗಳಿಂದ ರಕ್ಷಿಸಲು ಹೋರಾಟ ಮಾಡಬೇಕಿರುವುದು ಇಂದಿನ ಅನಿವಾರ್ಯವಾಗಿದೆ.

Writer - ರಮೇಶ ಎಂ., ಚಿತ್ರದುರ್ಗ

contributor

Editor - ರಮೇಶ ಎಂ., ಚಿತ್ರದುರ್ಗ

contributor

Similar News