ತೆಲಂಗಾಣ, ರಾಜಸ್ಥಾನದಲ್ಲಿ ಮತದಾನ ಆರಂಭ

Update: 2018-12-07 03:46 GMT

ಹೊಸದಿಲ್ಲಿ, ಡಿ.7: ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೇ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಅಗ್ನಿಪರೀಕ್ಷೆ ಎಂದೇ ಪರಿಗಣಿಸಲಾಗಿರುವ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬೆಳಿಗ್ಗೆ ಆರಂಭವಾಗಿದೆ.

ರಾಜಸ್ಥಾನದ 199 ಸ್ಥಾನಗಳಲ್ಲಿ 2,000 ಮಂದಿ ಉಮೇದುದಾರರಿದ್ದಾರೆ. ಈ ಮರಭೂಮಿ ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳಿಂದ ತಿಳಿದುಬಂದಿದ್ದು, ಇತ್ತೀಚೆಗೆ ನಡೆದ ಎಲ್ಲ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಾಧಿಸಿರುವುದರಿಂದ ವಸುಂಧರ ರಾಜೇ ಅವರ ಯುಗ ಅಂತ್ಯವಾಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಎಲ್ಲ 51,687 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ರಾಜಸ್ಥಾನದ 259 ಮತಗಟ್ಟೆಗಳಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಮತ್ತು ಭದ್ರತಾ ಪಡೆ ಸಿಬ್ಬಂದಿ ಇರುವುದು ವಿಶೇಷ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿ 160 ಶಾಸಕ ಬಲ ಹೊಂದಿದ್ದರೆ, ಕಾಂಗ್ರೆಸ್ ಸದಸ್ಯಬಲ 25.

ತೆಲಂಗಾಣದಲ್ಲಿ 119 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 32,815 ಮತಗಟ್ಟೆಗಳಲ್ಲಿ 2.8 ಕೋಟಿ ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸಲು ಸಜ್ಜಾಗಿದ್ದಾರೆ. ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ, ಆರೋಪ ಪ್ರತ್ಯಾರೋಪಗಳ ಬಳಿಕ ಶುಕ್ರವಾರ ಬೆಳಗ್ಗೆ ಮತದಾನ ಆರಂಭವಾಗಿದ್ದು, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ, ಆಡಳಿತಾರೂಢ ಟಿಆರ್‌ಎಸ್‌ಗೆ ಸವಾಲೊಡ್ಡಿದೆ. ಬಿಜೆಪಿ ತ್ರಿಕೋನ ಸ್ಪರ್ಧೆ ನೀಡುವ ಹುಮ್ಮಸ್ಸಿನಲ್ಲಿದೆ. ಎಲ್ಲ ಕ್ಷೇತ್ರಗಳಲ್ಲಿ ಮುಂಜಾನೆ 7ರಿಂದ ಸಂಜೆ 5ರವರೆಗೆ ಮತದಾನ ನಡೆದರೆ, ನಕ್ಸಲ್‌ಪೀಡಿತ 13 ಕ್ಷೇತ್ರಗಳಲ್ಲಿ ಮಾತ್ರ ಸಂಜೆ 4ಕ್ಕೆ ಮತದಾನ ಮುಕ್ತಾಯವಾಗಲಿದೆ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ರಜತ್ ಕುಮಾರ್ ಹೇಳಿದ್ದಾರೆ.

ವಾಸ್ತವವಾಗಿ ತೆಲಂಗಾಣ ವಿಧಾನಸಭಾ ಚುನಾವಣೆ ಮುಂದಿನ ಲೋಕಸಭೆ ಚುನಾವಣೆಯ ವೇಳೆ ನಡೆಯಬೇಕಿತ್ತು. ಆದರೆ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಕಳೆದ ಸೆಪ್ಟೆಂಬರ್‌ನಲ್ಲೇ ವಿಧಾನಸಭೆ ವಿಸರ್ಜಿಸಿರುವ ಹಿನ್ನೆಲೆಯಲ್ಲಿ ಅವಧಿಪೂರ್ವ ಚುನಾವಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News