ಮೊದಲು ಗೋಹತ್ಯೆಯ ತನಿಖೆ, ನಂತರ ಪೊಲೀಸ್ ಅಧಿಕಾರಿ ಹತ್ಯೆಯ ತನಿಖೆ: ಬುಲಂದ್‍ಶಹರ್ ಎಎಸ್ಪಿ

Update: 2018-12-07 07:29 GMT

ಹೊಸದಿಲ್ಲಿ, ಡಿ.7:  ಗೋ ಹತ್ಯೆ ನಡೆದಿದೆ ಎಂದು ಆರೋಪಿಸಿ ನಡೆದ ಹಿಂಸಾಚಾರದ ವೇಳೆ ಗುಂಪಿನಿಂದ ಹತ್ಯೆಗೀಡಾದ ಪೊಲೀಸ್ ಅಧಿಕಾರಿ ಸುಬೋಧ್  ಕುಮಾರ್ ಸಿಂಗ್  ಪ್ರಕರಣದ  ತನಿಖೆಗಿಂತ ಉತ್ತರ ಪ್ರದೇಶ ಪೊಲೀಸರಿಗೆ ಗೋ ಹತ್ಯೆ ಪ್ರಕರಣದ ತನಿಖೆ ನಡೆಸುವುದು ಹೆಚ್ಚು ಮಹತ್ವದ್ದಾಗಿ ಬಿಟ್ಟಿದೆ.

ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಬುಲಂದ್‍ ಶಹರ್ ಹೆಚ್ಚುವರಿ ಎಸ್ಪಿ ರಾಯೀಸ್ ಅಖ್ತರ್ ``ದನವನ್ನು ಯಾರು ಕೊಂದರೆಂದು ಪತ್ತೆ ಹಚ್ಚುವುದು ನಮ್ಮ ಈಗಿನ ಮುಖ್ಯ ಉದ್ದೇಶ. ಅಷ್ಟಕ್ಕೂ ದನದ ಹತ್ಯೆಯೇ ಪ್ರತಿಭಟನೆಗೆ ಕಾರಣವಾಗಿ ಪೊಲಿಸ್ ಅಧಿಕಾರಿಯ ಹತ್ಯೆಯಲ್ಲಿ ಪರ್ಯವಸಾನಗೊಂಡಿತ್ತು. ಗೋ ಹತ್ಯೆ ಪ್ರಕರಣ ಬೇಧಿಸಿದಾಗ  ಪೊಲೀಸ್ ಅಧಿಕಾರಿಯ ಹತ್ಯೆ ಏಕೆ ನಡೆಯಿತೆಂದು  ತಿಳಿಯುತ್ತದೆ ಗೋಹಂತಕರನ್ನು ಪತ್ತೆ ಹಚ್ಚುವುದು ನಮ್ಮ ಆದ್ಯತೆಯ ವಿಷಯವಾಗಿದೆ. ಕೊಲೆ ಹಾಗೂ ಹಿಂಸಾಚಾರ ನಂತರದ ವಿಚಾರ'' ಎಂದು ಹೇಳಿದ್ದಾರೆ.

ಪೊಲೀಸ್ ಅಧಿಕಾರಿ ಸಿಂಗ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದರೂ ಪ್ರಮುಖ ಆರೋಪಿ ಬಜರಂಗದಳ ಕಾರ್ಯಕರ್ತ ಯೋಗೇಶ್ ರಾಜ್ ಸಿಂಗ್ ಎಂಬಾತನನ್ನು ಇನ್ನಷ್ಟೇ ಬಂಧಿಸಬೇಕಿದೆ. ಗೋಹತ್ಯೆಗೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಗೋ ಹತ್ಯೆ ತಡೆ ಕಾಯಿದೆ 1955 ಅನ್ವಯ ಅವರ ಬಂಧನವಾಗಿದೆ.

ಗೋಹತ್ಯೆಯ ತನಿಖೆ ಕುರಿತಂತೆ ಕೇಳಲಾದ ಪ್ರಶ್ನೆಗೆ “ಯಾವುದೇ ನಿರ್ದಿಷ್ಟ ಗುಂಪನ್ನು  ಹೆಸರಿಸಲು ಸಾಧ್ಯವಿಲ್ಲ, ಆದರೆ  ಸಿಂಗ್ ಅವರ ಹತ್ಯೆ ಆರೋಪಿಗಳು ಗೋರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿದ್ದರೆಂಬುದು ಸ್ಪಷ್ಟ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News