ತೈಲ ಬೆಲೆ ನಿರ್ಣಯದಲ್ಲಿ ಮೋದಿ ಅಭಿಪ್ರಾಯ ಪರಿಗಣನೆ: ಸೌದಿ ತೈಲ ಸಚಿವ

Update: 2018-12-07 16:09 GMT

ವಿಯೆನ್ನಾ (ಆಸ್ಟ್ರಿಯ), ಡಿ. 7: ಕುಸಿಯುತ್ತಿರುವ ತೈಲ ಬೆಲೆಯನ್ನು ಆಧರಿಸಲು ಉತ್ಪಾದನೆಯನ್ನು ಕಡಿತ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಪ್ರಮುಖ ಬಳಕೆದಾರ ದೇಶಗಳನ್ನು ಪ್ರತಿನಿಧಿಸುವ ಪ್ರಧಾನಿ ನರೇಂದ್ರ ಮೋದಿ ಮುಂತಾದ ನಾಯಕರ ಅಭಿಪ್ರಾಯಗಳನ್ನು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಗಂಭೀರವಾಗಿ ಪರಿಗಣಿಸುವುದು ಎಂದು ಸೌದಿ ಅರೇಬಿಯದ ತೈಲ ಸಚಿವ ಖಾಲಿದ್ ಅಲ್ ಫಲಿಹ್ ಗುರುವಾರ ಹೇಳಿದ್ದಾರೆ.

ಭಾರತವು ಜಗತ್ತಿನ ಮೂರನೇ ಅತಿ ದೊಡ್ಡ ತೈಲ ಬಳಕೆದಾರ ದೇಶವಾಗಿದೆ. ಅದು ತನ್ನ ಇಂಧನ ಅಗತ್ಯದ 80 ಶೇಕಡಕ್ಕೂ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲಕ್ಕೆ ನ್ಯಾಯಸಮ್ಮತ ಹಾಗೂ ಜವಾಬ್ದಾರಿಯುತ ಬೆಲೆ ನಿಗದಿಪಡಿಸುವಂತೆ ಭಾರತ ಒಪೆಕ್‌ನ ತೈಲ ಉತ್ಪಾದಕ ದೇಶಗಳನ್ನು ಒತ್ತಾಯಿಸುತ್ತಿದೆ.

‘‘ನಾವು ಪ್ರಧಾನಿ ನರೇಂದ್ರ ಮೋದಿಯವರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಂತೆ ಈ ವಿಷಯದ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದಾರೆ. ನಾವು ಅವರನ್ನು ಈಗಷ್ಟೇ ಬ್ಯೂನಸ್ ಐರಿಸ್‌ನಲ್ಲಿ (ಜಿ20 ಶೃಂಗ ಸಮ್ಮೇಳನದಲ್ಲಿ) ಭೇಟಿಯಾಗಿದ್ದೇವೆ. ಆಗ ಅವರು ಈ ವಿಷಯವನ್ನು ನಮಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ನಾನು ಭಾರತೀಯ ಬಳಕೆದಾರರ ಬಗ್ಗೆ ಕಾಳಜಿ ಹೊಂದಿದ್ದೇನೆ ಹಾಗೂ ಆ ಬಗ್ಗೆ ಗಂಭೀರ ನಿಲುವು ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ನಡೆದ ವಿವಿಧ ಇಂಧನ ಸಮ್ಮೇಳನಗಳಲ್ಲಿ ನಾನು ಮೂರು ಬಾರಿ ಅವರನ್ನು ನೋಡಿದ್ದೇನೆ. ಆಗಲೂ ಅವರು ಇಂಧನ ಬೆಲೆಯ ಬಗ್ಗೆ ನನ್ನಲ್ಲಿ ಮಾತನಾಡಿದ್ದಾರೆ’’ ಎಂದು ಫಲಿಹ್ ಹೇಳಿದರು.

ಇಲ್ಲಿ ನಡೆಯುತ್ತಿರುವ ಒಪೆಕ್ ಸಭೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News