ಇಟಲಿ ನೈಟ್ ಕ್ಲಬ್ ನಲ್ಲಿ ಕಾಲ್ತುಳಿತ: ಆರು ಮಂದಿ ಮೃತ್ಯು, 35ಕ್ಕೂ ಅಧಿಕ ಮಂದಿಗೆ ಗಾಯ

Update: 2018-12-08 08:02 GMT

ರೋಮ್, ಡಿ.8: ಇಟಲಿಯ ಕೇಂದ್ರ ಎಡ್ರಿಯಾಟಿಕ್ ಪ್ರದೇಶದ ಪುಟ್ಟ ಪಟ್ಟಣ ಕೊರಿನಾಲ್ಡೋ ಎಂಬಲ್ಲಿ ನೈಟ್ ಕ್ಲಬ್ ವೊಂದರಲ್ಲಿ ಶನಿವಾರ ಸಂಭವಿಸಿದ ಅನಿರೀಕ್ಷಿತ ಕಾಲ್ತುಳಿತದಲ್ಲಿ ಒಟ್ಟು ಆರು ಜನರು ಮೃತ ಪಟ್ಟು ಸುಮಾರು 35 ಜನರು ಗಾಯಗೊಂಡಿದ್ದಾರೆ.

ಇಟಾಲಿಯನ್ ರ್ಯಾಪರ್ ಒಬ್ಬರ ಸಂಗೀತ ಕಾರ್ಯಕ್ರಮದ ವೇಳೆ ಈ ದುರಂತ ಸಂಭವಿಸಿದೆ. ಯಾರೋ ಪೆಪ್ಪರ್ ಸ್ಪ್ರೇಯಂತಹ ವಸ್ತುವನ್ನು ಸಭಿಕರತ್ತ ಸಿಂಪಡಿಸಿದ್ದರಿಂದ ಗಾಬರಿ ಹಾಗೂ ಗಲಿಬಿಲಿಗೊಂಡ ಸಭಿಕರು ನಿರ್ಗಮನ ದ್ವಾರದತ್ತ ಧಾವಿಸಿದ್ದೇ ಕಾಲ್ತುಳಿತಕ್ಕೆ ಕಾರಣವೆನ್ನಲಾಗಿದೆ.

ಮೃತರಲ್ಲಿ ಮೂವರು ಬಾಲಕಿಯರು, ಇಬ್ಬರು ಬಾಲಕರು ಹಾಗೂ ತನ್ನ ಪುತ್ರಿಯೊಂದಿಗೆ ಬಂದಿದ್ದ ಮಹಿಳೆಯೊಬ್ಬರು ಸೇರಿದ್ದಾರೆ. ಮೃತಪಟ್ಟವರ ವಯಸ್ಸು ತಿಳಿದು ಬಂದಿಲ್ಲ. ಗಾಯಾಳುಗಳ ಪೈಕಿ 12 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಇಟಾಲಿಯನ್ ರ್ಯಾಪರ್ ಸ್ಫೆರಾ ಎಬ್ಬಾಸ್ಟ ಅವರ ಸಂಗೀತ ಕಾರ್ಯಕ್ರಮ ಲ್ಯಾಂಟರ್ನಾ ಅಝುರ್ರ ನೈಟ್ ಕ್ಲಬ್ ನಲ್ಲಿ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನೆ ನಡೆದಾಗ ಅಲ್ಲಿ ಎಷ್ಟು ಜನರಿದ್ದರು ಎಂದು ತಿಳಿದುಬಂದಿಲ್ಲ. ನೈಟ್ ಕ್ಲಬ್ ನ ಒಂದು ತುರ್ತು ನಿರ್ಗಮನ ದ್ವಾರ ಬಂದ್ ಆಗಿತ್ತು ಎಂದು ಆ ಸಂದರ್ಭ ಅಲ್ಲಿದ್ದವರೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News