ಮೂಢನಂಬಿಕೆಗಳ ವಿರುದ್ಧ ಮಾತನಾಡುವವರಿಗೆ ಧರ್ಮ ವಿರೋಧಿ ಪಟ್ಟ: ಮಲ್ಲಿಕಾರ್ಜುನ ಖರ್ಗೆ

Update: 2018-12-08 15:58 GMT

ಬೆಂಗಳೂರು, ಡಿ.8: ಸಮಾಜದಲ್ಲಿಂದು ಮೂಢನಂಬಿಕೆಗಳ ವಿರುದ್ಧ ಮಾತನಾಡುವವರನ್ನು ಧರ್ಮದ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಲೋಕಸಭೆ ಕಾಂಗ್ರೆಸ್‌ನ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಶನಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಮಾಚಿದೇವ ಸಮಿತಿ ವತಿಯಿಂದ ಆಯೋಜಿಸಿದ್ದ ಅಶೋಕ ದೊಮ್ಮಲೂರು ಅವರ ‘ಗಹನ ಚೇತನ ಗಾಡಗೆ ಬಾಬಾ’ರ ಮೂರು ಭಾಷೆಗಳ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

12ನೆ ಶತಮಾನದಲ್ಲಿ ಬಸವಣ್ಣ ಸೇರಿದಂತೆ ಅನೇಕ ಶರಣರು ಮೂಢನಂಬಿಕೆ, ಅಸ್ಪಶ್ಯತೆ ವಿರುದ್ಧ ಚಳವಳಿಯನ್ನೇ ನಡೆಸಿದ್ದಾರೆ. ಅದನ್ನೇ ನಾವಿಂದು ಮುಂದುವರಿಸಿಕೊಂಡು ಸಂಸತ್ತಿನೊಳಗೆ ಹಾಗೂ ಹೊರಗೆ ಧ್ವನಿ ಎತ್ತಿದರೆ ನಮ್ಮನ್ನು ಧರ್ಮ ವಿರೋಧಿಗಳು ಎಂದು ಕರೆಯುತ್ತಿದ್ದು, ಅನಗತ್ಯ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ಗಾಡಗೆ ಬಾಬಾ ಅವರು ಜಾತಿ, ಧರ್ಮಕ್ಕೆ ಸೇರದೆ ಸಮಾಜದಲ್ಲಿನ ಮೂಢನಂಬಿಕೆ, ಕೆಟ್ಟ ಚಟುವಟಿಕೆಗಳನ್ನು ತಿರಸ್ಕರಿಸಬೇಕು ಎಂದು ಅವರ ಕೀರ್ತನೆಗಳ ಮೂಲಕ ಕರೆ ನೀಡಿದ್ದರು. ಆದರೆ, ಇಂದಿನ ಹಲವು ಕೀರ್ತನಕಾರರು ದೇವರ ಹೆಸರಿನಲ್ಲಿ ಭಕ್ತರನ್ನು ಓಲೈಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೆ, ಇಂದಿನ ಅನೇಕ ಮಠಗಳು ಅತ್ಯಂತ ಶ್ರೀಮಂತ ಮಠಗಳಾಗಿದ್ದು, ಹಣವಿಲ್ಲದ ಮಠಗಳು ಹಾಗೂ ಮಠಾಧೀಶರಿಗೆ ಬೆಲೆಯೇ ಇಲ್ಲ ಎಂದು ನುಡಿದರು.

ಬಾಬಾ ಅಪಾರವಾದ ಶಿಕ್ಷಣ ಪ್ರೇಮಿಯಾಗಿದ್ದರು. ತಾನು ದುಡಿದ ಎಲ್ಲವನ್ನೂ ಬಡವರ, ನಿರ್ಗತಿಕರ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗಾಗಿ ಬಳಸಿದ್ದಾರೆ. ಆದರೆ, ಇಂದು ನಮ್ಮಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿವೆ. ಅವೆಲ್ಲವೂ ಅಲ್ಲಿ ಓದಲು ಬರುವವರ ಹತ್ತಿರ ಲಕ್ಷಾಂತರ ರೂ.ಗಳನ್ನು ವಸೂಲಿ ಮಾಡುತ್ತಿದ್ದಾರೆ. ಆ ಮೂಲಕ ಶಿಕ್ಷಣ ಕೇಂದ್ರಗಳನ್ನು ವ್ಯಾಪಾರ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಚಿಂತಕ ಹಾಗೂ ಲೇಖಕ ರಂಜಾನ್ ದರ್ಗಾ ಮಾತನಾಡಿ, ಗಾಡಗೆ ಬಾಬಾ ಅವರು 12ನೆ ಶತಮಾನದಲ್ಲಿನ ಯಾವುದೇ ಶರಣರಿಗಿಂತ ಕಡಿಮೆ ಏನಿಲ್ಲ. ಅವಿದ್ಯಾವಂತರಾಗಿದ್ದ ಅವರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮಗಾಂಧಿಯಂತಹ ಅನೇಕರು ಸಲಹೆಗಳನ್ನು ಪಡೆಯುತ್ತಿದ್ದರು. ದೇಶದಲ್ಲಿಯೇ ಮೊದಲ ಬಾರಿಗೆ ಸ್ವಚ್ಛತೆಯ ಪಾಠ ಮಾಡಿದ ಅವರು, ಮಹಾರಾಷ್ಟ್ರದ ಹಳ್ಳಿ ಹಳ್ಳಿಯಲ್ಲಿ ಸಂಚರಿಸಿ ಅದರ ಬಗ್ಗೆ ಜಾಗೃತಿ ಮೂಡಿಸಿದ್ದರು ಎಂದರು.

ಸಮಾಜಕ್ಕಾಗಿ ತಮ್ಮ ಇಡೀ ಬದುಕನ್ನೇ ತ್ಯಾಗ ಮಾಡಿದ್ದ ಅವರು, ತಮ್ಮ ಕೀರ್ತನೆಗಳ ಮೂಲಕ ವೈಚಾರಿಕತೆಯನ್ನು ಬಿತ್ತಿದರು. ಅಲ್ಲದೆ, ಸಮಾಜದಲ್ಲಿ ಕೆಟ್ಟದ್ದನ್ನು ಪ್ರಶ್ನಿಸಿದ್ದರು. ಒಡೆದ ಮಡಿಕೆಯೊಂದಿಗೆ ಸುತ್ತಾಡುತ್ತಿದ್ದ ಬಾಬಾ ಎಂದೂ ಶ್ರೀಮಂತರ ಮನೆಗಳಲ್ಲಿ ವಾಸಿಸಲಿಲ್ಲ. ಬದಲಿಗೆ ದೇವಸ್ಥಾನಗಳಲ್ಲಿ, ಮರದ ಕೆಳಗಡೆಯೇ ವಾಸಿಸುತ್ತಿದ್ದರು. ತನಗೆ ದೇಣಿಗೆಯಾಗಿ ಬರುತ್ತಿದ್ದ ಅಷ್ಟೂ ಹಣವನ್ನು ತನಗಾಗಿ ಬಳಸಿಕೊಳ್ಳದೆ ವೃದ್ಧಾಶ್ರಮ, ಮಕ್ಕಳ ಶಿಕ್ಷಣಕ್ಕಾಗಿ ಬಳಸುತ್ತಿದ್ದರು ಎಂದು ಅವರು ಹೇಳಿದರು.

ಗಾಡಗೆ ಬಾಬಾ ಅವರ ಸೇವೆಯನ್ನು ಸ್ಮರಿಸಿ ಮಹಾರಾಷ್ಟ್ರದ ಸರಕಾರ ಅಲ್ಲಿನ ಒಂದು ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದ ರಂಜಾನ್ ದರ್ಗಾ, ತನ್ನ ಆಸ್ತಿಯು ನನ್ನ ಸಂಬಂಧಿಕರಿಗೆ, ಕುಟುಂಬದವರಿಗೆ ಅಥವಾ ನನ್ನ ಶಿಷ್ಯರು ಎಂದುಕೊಂಡವರಿಗೆ ಸೇರಿದ್ದಲ್ಲ. ಅದು ಜನರಿಂದ ಬಂದಿರುವ ಆಸ್ತಿ, ಜನರಿಗೆ ಸೇರಬೇಕು ಎಂದು ಉಯಿಲು ಬರೆದಿದ್ದರು ಎಂದು ನೆನಪಿಸಿಕೊಂಡರು.

ಸಮಾರಂಭದಲ್ಲಿ ಉತ್ತರ ಪ್ರದೇಶದ ಸಂಸದ ರಾಜೇಶ್ ಕುಮಾರ್ ದಿವಾಕರ್, ಸಾಹಿತಿ ಗೊ.ರು.ಚನ್ನಬಸಪ್ಪ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಶಾಸಕ ಶ್ಯಾಮ್ ರಜಾಕ್, ಪ್ರಾದ್ಯಾಪಕ ಡಾ.ಟಿ.ಜಿ.ಪ್ರಭುಶಂಕರ ಪ್ರೇಮಿ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಬಸವರಾಜ ಸಾದರ, ಲೇಖಕ ಅಶೋಕ ದೊಮ್ಮಲೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News