ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ಗೆ ಅರ್ಜೆಂಟೀನ ಎದುರಾಳಿ

Update: 2018-12-11 04:49 GMT

ಭುವನೇಶ್ವರ, ಡಿ.10: ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಸೋಮವಾರ ನಡೆದ ಕ್ರಾಸ್ ಓವರ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಪ್ರಾಬಲ್ಯ ಸಾಧಿಸಿದ ಇಂಗ್ಲೆಂಡ್ 2-0 ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿದೆ. ಆಂಗ್ಲರ ಪರ ವಿಲ್ ಕಲ್ನಾನ್ಸ್(25ನೇ ನಿಮಿಷ) ಫೀಲ್ಡ್ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿದರೆ, ಲೂಕ್ ಟೇಲರ್ 44ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಇಂಗ್ಲೆಂಡ್ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಇಂಗ್ಲೆಂಡ್ ಬುಧವಾರ ನಡೆಯಲಿರುವ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನವನ್ನು ಎದುರಿಸಲಿದೆ.

 ವಿಶ್ವದ ನಂ.7ನೇ ತಂಡ ಇಂಗ್ಲೆಂಡ್ 9ನೇ ರ್ಯಾಂಕಿನ ಎದುರಾಳಿ ನ್ಯೂಝಿಲೆಂಡ್ ವಿರುದ್ಧ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಹಲವು ಬಾರಿ ಗೋಲು ಗಳಿಸುವ ಅವಕಾಶ ಸೃಷ್ಟಿಸಿತು. ಇಂಗ್ಲೆಂಡ್ 5ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿತು.

ಇಂಗ್ಲೆಂಡ್ 25ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. 28ನೇ ನಿಮಿಷದಲ್ಲಿ ಕಿವೀಸ್‌ನ ನಿಕ್ ರಾಸ್ ಗೋಲು ಗಳಿಸುವ ವಿಫಲಯತ್ನ ನಡೆಸಿದರು. ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ಸತತ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಎರಡೂ ಅವಕಾಶವನ್ನು ವ್ಯರ್ಥ ಮಾಡಿತು. ಇಂಗ್ಲೆಂಡ್ 44ನೇ ನಿಮಿಷದಲ್ಲಿ ತನಗೆ ಲಭಿಸಿದ್ದ 4ನೇ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿತು. ಟೇಲರ್ ಗೋಲು ಗಳಿಸಲು ಸಫಲರಾದರು. ನ್ಯೂಝಿಲೆಂಡ್ 49ನೇ ನಿಮಿಷದಲ್ಲಿ ಸೋಲಿನ ಅಂತರ ತಗ್ಗಿಸುವ ಸನಿಹ ತಲುಪಿತ್ತು. ಸ್ಟೀಫನ್ ಜೆನ್ನಿಸ್ ಹೊಡೆದ ಬಾಲ್ ಇಂಗ್ಲೆಂಡ್ ಗೋಲ್‌ಕೀಪರ್ ಪಿನ್ನರ್ ತಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News